ನರೇಂದ್ರ ಎಸ್ ಗಂಗೊಳ್ಳಿ.
ಡೋಡೋ.ಡೋಡೋ… ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ನಮಗನ್ನಿಸಿದರೆ ಅಚ್ಚರಿಯೇನಿಲ್ಲ. ಇತಿಹಾಸ ಎಷ್ಟು ಪಾಠಗಳನ್ನು ಕಲಿಸಿದರೂ ಕಲಿಯಲು ತಯಾರಿಲ್ಲದ ಮನಸ್ಥಿತಿ ನಮ್ಮಲ್ಲಿ ಬಹತೇಕರದ್ದು. ನಿಜ. ಡೋಡೋ ಎನ್ನುವುದು ಮನುಷ್ಯನ ದುರಾಸೆಗೆ ಬಲಿಯಾಗಿ ತಮ್ಮ ಸಂಪೂರ್ಣ ಅಸ್ತಿತ್ವವನ್ನೇ ಕಳೆದುಕೊಂಡು ಈಗ ಕೇವಲ ಇತಿಹಾಸದ ಒಂದು ಭಾಗವಾಗಿಬಿಟ್ಟಿರುವ ಪಾಪದ ಹಕ್ಕಿಯ ಹೆಸರು. ಆ ಪಕ್ಷಿ ಈಗಿಲ್ಲ. ಡ್ಯನೋಸಾರ್ ನಂತಹ ಪ್ರಾಣಿಗಳು ಕಾಲನ ಹೊಡೆತಕ್ಕೆ ಸಿಕ್ಕು ಕಣ್ಮರೆಯಾದರೆ ಡೋಡೋ ಮಾತ್ರ ನಾಶವಾದದ್ದು ಪಕ್ಕಾ ಮನುಷ್ಯನ ದುರಾಸೆಯಿಂದಲೇ ಅನ್ನುವುದು ಸತ್ಯ. ಬರೀ ಡೋಡೋ ಹಕ್ಕಿಯದ್ದು ಮಾತ್ರ ಈ ಕಥೆ ಅಲ್ಲ. ಮಾನವನ ದುರಾಸೆಯಿಂದಾಗಿ ಇಂದು ಪ್ರಪಂಚದಾದ್ಯಂತ ಅನೇಕ ರೀತಿಯ ಜೀವಿಗಳು ತಮ್ಮ ಅಸ್ತಿತ್ವದ ಭೀತಿಯನ್ನು ಎದುರಿಸುತ್ತಿವೆ. ದೂರವೇಕೆ ಹೋಗಬೇಕು? ನಮ್ಮಲ್ಲಿ ಗುಬ್ಬಚ್ಚಿ ಮರಿಗಳ ಕತೆ ಕೇಳಿದರೆ ಸಾಕಲ್ಲವಾ? ಒಂದೊಮ್ಮೆ ,ಸರಿಯಾಗಿ ಹೇಳಬೇಕೆಂದರೆ ಈಗ್ಗೆ ಹದಿನೈದು ಇಪ್ಪತ್ತು ವರುಷಗಳ ಹಿಂದೆಯಷ್ಟೇ ಮನೆ ಮನೆಯ ಸಂದಿ ಗೊಂದಿಗಳಲ್ಲಿ ತಮ್ಮ ಪುಟ್ಟ ಪುಟ್ಟ ಹುಲ್ಲಿನ ಗೂಡುಗಳನ್ನು ನಿರ್ಮಿಸಿಕೊಂಡು ದಿನವಿಡೀ ಚಿಲಿಪಿಲಿ ಗುಟ್ಟುತ್ತಾ ಮನೆಯ ಸದಸ್ಯರುಗಳೇ ಆಗಿ ಹೋಗಿದ್ದ ಗುಬ್ಬಚ್ಚಿಗಳು ಈಗ ಅತ್ಯಂತ ವಿರಳವೆನ್ನಿಸುವಷ್ಟರ ಮಟ್ಟಿಗೆ ಕಾಣೆಯಾಗಿ ಹೋಗುತ್ತಲಿವೆ.
ಗುಬ್ಬಚ್ಚಿ ಮಾತ್ರವಲ್ಲ ಯುರೋಪ್ ದೇಶದಲ್ಲಿ ಹಡುವ ಹಕ್ಕಿಯಾಗಿ ಗುರುತಿಸಿಕೊಳ್ಳುತ್ತಿದ್ದ ಥ್ರಶ್ ಬರ್ಡ್, ಫಿಂಚ್ ಹಕ್ಕಿ ಸೇರಿದಂತೆ ಅದರ ಅನೇಕ ಪ್ರಭೇದಗಳು ಅಳಿವಿನಂಚಿಗೆ ಬಂದು ನಿಂತಿವೆ. ಮನುಷ್ಯನ ದುರಾಸೆ ಎಲ್ಲಿಯವರೆಗೆ ಇಡೀ ಭೂಮಿಯನ್ನು ಗಂಡಾಂತರಕ್ಕೆ ತಂದಿದೆ ಎಂದರೆ ಇಲ್ಲಿನ ಜೀವಿಗಳ ಸಾಮೂಹಿಕ ನಾಶಕ್ಕೆ ಅದು ಮುನ್ನುಡಿಯನ್ನು ಬರೆಯುತ್ತಲಿದೆ. ಈಗಾಗಲೇ ವೈಜ್ಞಾನಿಕ ಆಧಾರಗಳ ಪ್ರಕಾರ ಈ ಭೂಮಿಯಲ್ಲಿ ಐದು ಬಾರಿ ಜೀವಿಗಳ ಸಾಮೂಹಿಕ ನಾಶ ನಡೆದು ಮರು ಹುಟ್ಟು ಪ್ರಕ್ರಿಯೆ ನಡೆದಿತ್ತು.ಆಗೆಲ್ಲಾ ಜೀವನಾಶವಾಗಿದ್ದು ಪ್ರಾಕೃತಿಕ ದುರಂತಗಳು ಉಲ್ಕಾಪಾತಗಳು ಇತ್ಯಾದಿಗಳಿಂದಾಗಿ. ಆದರೆ ಆರನೇ ಬಾರಿ ಹಾಗೇನಾದರೂ ಆದಲ್ಲಿ ಅದಕ್ಕೆ ಮಾನವನೇ ಕಾರಣ ಆಗಿರುತ್ತಾನೆ ಅನ್ನುವುದು ನಿಜಕ್ಕೂ ವಿಷಾದಕರ. ಪರಿಸರದ ಜೀವಿಗಳ ಬಗೆಗ ನಮ್ಮ ಅನಾದರ ಹೀಗೆಯೇ ಮುಂದುವರಿದರೆ ಅಂತಹ ದಿನಗಳು ಬಂದರೂ ಅಚ್ಚರಿ ಇರಲಾರದು.
ಅಮೇರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಜೀವಶಾಸ್ತ್ರ ವಿಭಾಗದ ಪ್ರೊಫೆಸರ್ ಆಗಿರುವ ಸಂಶೋಧಕ ರುಡಾಲ್ಫ್ ಡಿರ್ಜೊ ಅವರು ಇತ್ತೀಚೆಗೆ ವ್ಯಕ್ತಪಡಿಸಿರುವ ಈ ರೀತಿಯ ಅಭಿಪ್ರಾಯ ಮತ್ತೆ ಮತ್ತೆ ನಾವುಗಳು ನಮ್ಮನ್ನು ಪ್ರಶ್ನಿಸಿಕೊಳ್ಳುವಂತೆ ಮಾಡಿರುವುದು ಸತ್ಯ. ನಿಜ. ಇತ್ತೀಚಿನ ವರುಷಗಳಲ್ಲಿ ಅತ್ಯಂತ ತೀವ್ರ ಗತಿಯಲ್ಲಿ ಹಲವಾರು ಜೀವ ಸಂಕುಲಗಳ ನಾಶವಾಗುತ್ತಿದೆ. ಒಂದು ಮೂಲದ ಪ್ರಕಾರ ೧೫ಂಂ ರಿಂದ ಈಚೆಗೆ ಸುಮಾರು ೩೨ಂಕ್ಕೂ ಹೆಚ್ಚು ಕಶೇರುಕ ಪ್ರಾಣಿಗಳು ಹೇಳ ಹೆಸರಿಲ್ಲದಂತೆ ಅಳಿಸಿಹೋಗಿವೆ. ಉಳಿದಿರುವ ಕಶೇರುಕ ಪ್ರಾಣಿ ಪಕ್ಷಿಗಳ ವಿಭಾಗದಲ್ಲಿ ಶೇಕಡ ಇಪ್ಪತೈದರಷ್ಟು ವಿನಾಶದ ಅಂಚಿನಲ್ಲಿವೆ. ಎಲ್ಲಾ ಬಗೆಯ ಕಶೇರುಕ ಜೀವಿಗಳನ್ನು ಸೇರಿಸಿದರೆ ಸುಮಾರು ೧೬ ರಿಂದ ೩೩ ರಷ್ಟು ಜೀವಿಗಳು ಅಪಾಯದ ಅಂಚಿನಲ್ಲಿವೆ ಎನ್ನಲಾಗಿದೆ.ಆನೆಗಳು ಖಡ್ಗಮೃಗಗಳು, ಹಿಮಕರಡಿಗಳು ಒರಂಗುಟಾನ್ ಪಾಂಡಾ ತನ್ನ ವಿಶಿಷ್ಠ ಬಣ್ಣದ ಮುಖಚಹರೆಗೆ ಹೆಸರಾಗಿರುವ ಆಫ್ರಿಕಾದ ದೊಡ್ಡ ಕೋತಿ ಮ್ಯಾಂಡ್ರಿಲ್ ಸೇರಿದಂತೆ ನೂರಾರು ಜಾತಿಯ ಪ್ರಾಣಿಗಳ ಸಂಖ್ಯೆ ಅತ್ಯಂತ ವೇUವಾಗಿ ನಶಿಸುತ್ತಿದೆ.ಒಕ್ಟ್ರಾಯ್ ಜಾತಿಯ ಒಂಟೆಗಳು ಈ ಗುಂಪಿನಲ್ಲಿ ಸೇರಿವೆ.
ನಿಮಗೆ ಗೊತ್ತಿರಲಿ ಕಳೆದ ಮೂವತೈದು ವರುಷಗಳಲ್ಲಿ ಮಾನವರ ಸಂಖ್ಯೆ ದ್ವಿಗುಣವಾಗಿದೆ. ಆದರೆ ಅಕಶೇರುಕ ಸಮುದಾಯಕ್ಕೆ ಸೇರಿದ ದುಂಬಿಗಳು,ಚಿಟ್ಟೆಗಳು, ಜೇಡಗಳು ಮತ್ತಿತರ ವಿವಿಧ ಬಗೆಯ ಹುಳುಗಳ ಸಂಖ್ಯೆ ಶೇಕಡ ನಲವತೈದರಷ್ಟು ಕುಸಿದು ಹೋಗಿದೆ.ಇತ್ತೀಚಿನ ಕೆಲ ವರುಷಗಳಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ನಾಶದಿಂದಾಗಿ ಜೇನುಹುಳುಗಳ ಸಂಖ್ಯೆ ಮೂರನೇ ಒಂದು ಭಾಗದಷ್ಟು ನಾಶವಾಗಿವೆ. ಅದು ನೇರವಾಗಿ ಆಹಾರ ಉತ್ಪಾದನಾ ಸಾಮರ್ಥ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.ನಿಮಗೆ ಗೊತ್ತಿರಲಿ ಪರಾಗಸ್ಪರ್ಶ ಕ್ರಿಯೆಯ ಮೂಲಕ ವಿವಿಧ ಸಸ್ಯ ತಳಿ ಸಂಕುಲದ ಅಭಿವೃದ್ದಿಯಲ್ಲಿ ಜೇನ್ನೊಣಗಳ ಪಾತ್ರ ಅತ್ಯಂತ ಮಹತ್ತರವಾದದ್ದು. ಕಡಲಾಮೆಯ ಏಳು ಪೆಭೇಧಗಳ ಪೈಕಿ ಆರು ಪ್ರಭೇಧಗಳು ಅಪಾಯದ ಅಂಚಿನಲ್ಲಿವೆ. ಇದೆಲ್ಲಾ ಕೆಲವು ಉದಾಹರಣೆಗಳು ಅಷ್ಟೇ. ಈ ಪಟ್ಟಿ ಬರೆದರೆ ಅದೇ ಪುಟಗಟ್ಟಲೆ ತುಂಬುತ್ತದೆ.
ಉಳಿದ ಜಿಲ್ಲೆಗಳ ಬಗೆಗೆ ನನಗೆ ತಿಳಿದಿಲ್ಲ ಆದರೆ ನೀವು ಉಡುಪಿ ಜಿಲ್ಲೆಯ ಗ್ರಾಮಗಳ ಬಳಿಗೆ ಬಂದರೆ ನೀವು ಖಂಡಿತಾ ಹರ್ಷ ಪಡುತ್ತೀರಿ.ಹೌದು ನಮ್ಮ ರಾಷ್ಟ್ರಪಕ್ಷಿ ನವಿಲುಗಳು ಈ ಗ್ರಾಮಗಳ ಮನೆಯಂಗಳದಲ್ಲೇ ಬಂದು ಕಾಳು ಕಡ್ಡಿಗಳನ್ನು ತಿನ್ನುತ್ತಿರುತ್ತವೆ. ನಮ್ಮೂರ ಹೊಲಗಳಲ್ಲಿ ಲೋಕಾಭಿರಾಮವಾಗಿ ಅಡ್ಡಾಡಿಕೊಂಡಿರುತ್ತವೆ. ಜನರೆದುರೇ ಗರಿಬಿಚ್ಚಿ ನರ್ತಿಸುತ್ತವೆ (ಆ ನರ್ತನದ ಹಿಂದೆ ಅದೆಷ್ಟು ದುಗುಡಗಳಿವೆಯೋ ಬಲ್ಲವರಾರು?) ಕೂಗುತ್ತವೆ. ಜನರ ಪ್ರೀತಿ ಅತಿಯಾದರೆ ಅವರಿಂದ ಕೈತುತ್ತನ್ನು ಪಡೆದು ತಿನ್ನುತ್ತವೆ. ಇಲ್ಲಿನ ಜನರಿಗೆ ನವಿಲುಗಳು ಕೋಳಿಯಷ್ಟೇ ಕಾಮನ್ ಅನ್ನುವಂತಾಗಿಬಿಟ್ಟದೆ. ಖುಷಿಯಾಯಿತಾ ಆಗಲಿ.. ಹಾಗೆ ಇನ್ನೊಂದನ್ನು ಗಮನಿಸಿ ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಆಗಾಗ್ಗೆ ಹುಲಿ ಚಿರತೆಗಲು ಗ್ರಾಮಕ್ಕೆ ಲಗ್ಗೆ ಹಾಕಿ ನಾಯಿ ಹಸು ತೋಳ ಕೊನೆಗೆ ಮನುಷ್ಯರನ್ನು ಕಚ್ಚಿ ಎಳೆದೊಯ್ದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ತಪ್ಪು ಖಂಡಿತಾ ಅವುಗಳದ್ದಲ್ಲ. ಅವು ಕಾಳು ಕಡ್ಡಿಗಳನ್ನು ತಿನ್ನುವುದಿಲ್ಲ. ಅವುಗಳ ಆಹಾರ ಮಾಂಸವೇ ಆಗಬೇಕು.
ನಿಮಗೆ ಗೊತ್ತಿರಲಿ ನವಿಲು ಚಿರತೆ ಹುಲಿ ಎಲ್ಲವೂ ನಮ್ಮ ಮನೆ ಬಾಗಿಲುಗಳಿಗೆ ಬರುವಂತಾಗಿದ್ದು ಆಹಾರದ ಸಲುವಾಗಿ. ಮತ್ತೆ ಹಾಗೆ ಅವುಗಳು ಕಾಡು ತೊರೆದು ನಾಡಿಗೆ ಬರುವಂತೆ ಮಾಡಿದ್ದು ನಾವುಗಳೇ. ನಮ್ಮ ವಾಸಿಸುವಿಕೆಗಾಗಿ ಅರಣ್ಯಗಳನ್ನು ಬೃಹತ್ ಪ್ರಮಾಣದಲ್ಲಿ ಕಡಿಯುತ್ತಾ ಸಾಗಿದ ನಾವುಗಳು ಆ ಪ್ರಾಣಿಗಳ ವಾಸಸ್ಥಾನವನ್ನು ಅತಿಕ್ರಮಿಸಿಕೊಂಡೆವು. ಅವುಗಳು ಆಹಾರಕ್ಕಾಗಿ ಬೇರೆಲ್ಲಿ ತಾನೇ ಹೋಗಲು ಸಾಧ್ಯ? ಬೃಹತ್ ಪ್ರಾಣಿಗಳ ವಂಶಾಭಿವೃದ್ಧಿಗೆ ಅಡ್ಡಗಾಲಿಕ್ಕಿದವರೂ ನಾವುಗಳೇ. ಅವುಗಳ ಸಂತಾನಾಭಿವೃದ್ಧಿಗೆ ಅಗತ್ಯವಾಗಿದ್ದ ವಿಶಾಲ ಭೂಪ್ರದೇಶಗಳನ್ನು ನಾವು ನುಂಗುತ್ತಾ ಸಾಗಿದ್ದರ ಪರಿಣಾಮ ಅದು. ಅವುಗಳ ಜಲಮೂಲಗಳಿಗೂ ಕೊಳ್ಳಿ ಇಕ್ಕಿದ್ದು ನಾವೇ ಅಲ್ಲವೇ?
ಅಯ್ಯೋ ಎಷ್ಟು ಪ್ರಾಣಿಗಳು ಬೇಕಾದರೆ ನಾಶವಾಗಲಿ ನಮಗೇನು? ನಾವು ನಮ್ಮನ್ನು ಉಳಿಸಿಕೊಳ್ಳೋದು ಮುಖ್ಯ ಅದಕ್ಕೆ ಈ ಆಧುನೀಕರಣ ಕಾಂಕ್ರೀಟಿಕರಣ ….ಎಲ್ಲವೂ ಅನಿವಾರ್‍ಯ ಅನ್ನೋರು ನಮ್ಮ ನಡುವೆ ಇದ್ದಾರೆ. ಹೀಗೆ ಹೇಳಿಕೆ ನೀಡುವುದು ಮೂರ್ಖತನವಲ್ಲದೇ ಬೇರೇನೂ ಅಲ್ಲ. ನಮಗೆಲ್ಲಾ ತೀಳಿದಿರುವ ಹಾಗೆ ಪ್ರಕೃತಿ ತನ್ನದೇ ಆದ ನೀತಿ ನಿಯಮಗಳನ್ನು ಹೊಂದಿದೆ. ಪ್ರಕೃತಿಯಲ್ಲೊಂದು ವಿಶಿಷ್ಠವಾದ ಜೈವಿಕ ಸರಪಳಿಯಿದೆ ಅದು ಎಲ್ಲಾ ಜೀವಿಗಳ ನಡುವಿನ ಹೊಂದಾಣಿಕೆ ಮತ್ತು ಸ್ಥಿರತೆಗೆ ಕಾರಣವಾಗಿರುವಂತಾದ್ದು..ಸಿಂಪಲ್ ಆಗಿ ಒಂದು ಉದಾಹರಣೆ ಕೊಡೋದಾದರೆ ಪರಾಗಸ್ಪರ್ಶ ಕ್ರಿಯೆಯನ್ನು ನಡೆಸಲು ದುಂಬಿಗಳಂತಹ ಜೀವಿಗಳು ಇಲ್ಲದೇ ಹೋಗಿದ್ದಲ್ಲಿ ಎಷ್ಟು ಸಸ್ಯವರ್ಗ ನಮ್ಮಲ್ಲಿ ಉಳಿದುಕೊಳ್ಳುತಿತ್ತು ಹೇಳಿ? ಪ್ರಕೃತಿಯ ಮತ್ತು ಅದರಲ್ಲಿನ ಎಲ್ಲಾ ಜೀವಿಗಳ ಉಳಿವು ಮತ್ತು ಬೆಳವಣಿಗೆಗೆ ಈ ರೀತಿಯ ಪರಸ್ಪರ ಪೂರಕವಾದ ಸಹಕಾರ ಮತ್ತು ಅವಲಂಬನೆ ಅತ್ಯಗತ್ಯ. ಅದರಲ್ಲಿ ವ್ಯತ್ಯಾಸಗಳು ಕಂಡು ಬಂದರೆ ಜೀವಿಗಳ ಉಳಿವಿಗೂ ಸಂಚಕಾರ ಬಂತು ಅಂತಲೇ ಅರ್ಥ.
ರುಡಾಲ್ಫ್ ಡಿರ್ಜೊ ಅಭಿಪ್ರಾಯ ಪಡುವ ಪ್ರಕಾರ ಮಾನವನ ದುರಾಸೆಯ ಪರಿಣಾಮವಾಗಿ ಇಂದು ಅನೇಕ ವೈವಿಧ್ಯಮಯವಾದ ಜೀವಿಗಳು ನಾಶ ಹೊದುತ್ತಿವೆ, ಹಾಗೆ ಜೀವಿಗಳು ನಾಶಗೊಳ್ಳುವ ಭೂ ಪ್ರದೇಶಗಳಲ್ಲಿ ಇಲಿಗಳ ಸಂಖ್ಯೆ ಹೆಚ್ಚಾಗುವ ಸಂಭನೀಯತೆ ಇರುತ್ತದೆ. ಇವುಗಳಿಗೆ ಶತ್ರು ಭಯ ಇರುವುದಿಲ್ಲ. ಭೂಮಿಯ ಮಣ್ಣಿನ ಪದರು ಕುರುಚಲು ಪೊದೆ ಪೊಟರೆಗಳನ್ನು ತಮ್ಮ ಆವಾಸಕ್ಕಾಗಿ ಹೇರಳವಾಗಿ ಬಳಸಿಕೊಳ್ಳುತ್ತವೆ. ಆ ಮೂಲಕ ಮಣ್ಣಿನ ಫಲವತ್ತತೆ ನಾಶವಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾಯಿಲೆಗಳನ್ನು ಹರಡೋದರಲ್ಲಿ ಇವುಗಳು ನಂಬರ್ ಒನ್. ಹಾಗಾಗಿ ಅಂತಿಮವಾಗಿ ಮನುಷ್ಯನ ಆರೋಗ್ಯದ ಮೇಲೂ ಇವುಗಳು ತೀವ್ರತೆರನಾದ ಕೆಟ್ಟ ಪರಿಣಾಮವನ್ನು ಬೀರುತ್ತವೆ.
ಗೊತ್ತಿರಲಿ ಇದು ಒಂದು ಅಭಿಪ್ರಾಯ ಅಷ್ಟೆ. ಆದರೆ ಜೀವಿಗಳ ಒಟ್ಟಾರೆ ನಾಶದ ಪರಿಣಾಮ ಊಹಿಸಲು ಅಸಾಧ್ಯವಾದದ್ದು. ಮಾನವನೂ ಕೂಡ ಈ ಪ್ರಕೃತಿಯ ಜೈವಿಕ ವ್ಯವಸ್ಥೆಯ ಒಂದು ಭಾಗ ಅನ್ನೋದನ್ನು ಮರೆಯಬಾರದು. ಇಡೀ ಜೈವಿಕ ವ್ಯವಸ್ಥೆ ಹಾಳಾದ ಬಳಿಕವೂ ತಾನು ಉಳಿಯುತ್ತೇನೆ ಅನ್ನೋದು ಕೇವಲ ಭ್ರಮೆ.ನಮ್ಮ ಸಾವಿಗೆ ನಾವೇ ಮುನ್ನುಡಿ ಬರೆದುಕೊಳ್ಳುತ್ತಿದ್ದೇವಲ್ಲ…..!ಇನ್ನಾದರೂ ನಾವು ಈಗಿಂದೀಗಲೇ ಜಾಗರೂಕರಾಗಬೇಕಿದೆ. ನಮ್ಮ ಆಸೆಗಳಿಗೆ ಮಿತಿಯನ್ನು ಹಾಕಿಕೊಳ್ಳಬೇಕಿದೆ. ಜೀವಿಗಳ ಅಳಿವು ಉಳಿವಿನ ಮಹತ್ವದ ಬಗೆಗೆ ಪ್ರಾಕೃತಿಕ ಸಮತೋಲನದ ಅಗತ್ಯತೆಯ ಬಗೆಗೆ ಎಲ್ಲರಲ್ಲೂ ಸರಿಯಾದ ತಿಳುವಳಿಕೆ ಮೂಡಿಸುವ ಕಾರ್‍ಯಗಳು ಆಗಬೇಕಿದೆ.ಒಟ್ಟಾರೆ ಪರಿಸರದ ರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕಿದೆ. ಇದಾವುದು ಆಗುವುದಿಲ್ಲ ಎಂದಾದಲ್ಲಿ ಉಳಿದ ಜೀವಿಗಳ ಜೊತೆಗೆ ನಾವುಗಳು ನಾಶವಾಗಲು ಸಿದ್ಧರಾಗಬೇಕಿದೆ. ರೆಡೀನಾ? ಆಯ್ಕೆ ನಮಗೆ ಬಿಟ್ಟದ್ದು.