ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಳ್ಳೆಯ ಯೋಜನೆ, ಚಿಂತನೆ ಜಾರಿಗೆ ಕುಂದಾಪುರ ಮೊದಲ ಆದ್ಯತೆ ನೀಡುತ್ತದೆ. 2018-19ರಲ್ಲಿ ಕುಂದಾಪುರದಲ್ಲಿ ಎಎಸ್ಪಿಯಾಗಿದ್ದ ಸಂದರ್ಭ ಕಳ್ಳತನ ತಡೆಗೆ ಜಾರಿಗೆ ತಂದಿದ್ದ ಸಿಸಿ ಟಿವಿ ಮಾನಿಟರಿಂಗ್ ಸಿಸ್ಟಮ್ ದೇಶದಲ್ಲಿ ಮೊದಲ ಯಶಸ್ವಿ ಪ್ರಯೋಗವಾಗಿ ಇಲ್ಲಿ ಜಾರಿಗೊಂಡಿದೆ. ಅಂದು ಸೊಸೈಟಿ, ದೇವಸ್ಥಾನಗಳಿಗೆ 900ಕ್ಕೂ ಮಿಕ್ಕಿ ಸೇಫ್ ಕ್ಯಾಮರಾ ಅಳವಡಿಸಿ ಲೈವ್ ಮಾನಿಟರಿಂಗ್ ಸಿಸ್ಟಂ ಜಾರಿಗೊಳಿಸಲಾಗಿದ್ದು ಕಳ್ಳತನ ಪ್ರಕರಣಕ್ಕೆ ದೊಡ್ಡಬ್ರೇಕ್ ಬಿದ್ದಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.

ಅವರು ಇಲ್ಲಿನ ಕುಂದೇಶ್ವರ ದೇವಳದ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಪೊಲೀಸ್, ಕುಂದಾಪುರ ಪೊಲೀಸ್ ಉಪವಿಭಾಗ ಮತ್ತು ಕುಂದಾಪುರ ಪೊಲೀಸ್ ಠಾಣೆ ಆಶ್ರಯದಲ್ಲಿ ಆಯೋಜಿಸಿದ್ದ ದೃಷ್ಟಿ ಯೋಜನೆಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 201 ಜಂಕ್ಷನ್ ಮತ್ತು ಗಡಿರೋಡ್ ಗುರುತಿಸಿದ್ದೇವೆ. ಇಲ್ಲಿ ಸೇಫ್ ಕ್ಯಾಮರಾ ಅಳವಡಿಕೆ ನಡೆಯಲಿದೆ. ನೈಟ್ ವಿಷನ್ ಕ್ಯಾಮರಾ ಬಳಕೆ ಮಾಡಲಾಗುತ್ತದೆ. ಇಡಿ ರಾಜ್ಯದಲ್ಲೇ ಮೊದಲ ಬಾರಿಗೆ ಜಂಕ್ಷನ್ ಗುರುತಿಸಿ ಕ್ಯಾಮೆರಾ ಅಳವಡಿ ಸುವ ಪ್ರಕ್ರಿಯೆ ಉಡುಪಿ ಛೇಂಬರ್ಸ್ ಆಫ್ ಕಾಮರ್ಸ್ ಸಹಯೋಗದೊಂದಿಗೆ ನಡೆಯಲಿದೆ. ಇದರಿಂದ ಕಳ್ಳತನ ಪ್ರಕರಣ ಕಡಿಮೆಯಾಗಲಿದೆ. ಕಳ್ಳತನ ಆದರೂ ಕೂಡಲೇ ಅಪರಾಧಿಗಳು ಪತ್ತೆಯಾಗುವರು. ಉಡುಪಿ ಜಿಲ್ಲೆ ಸೇಫ್ ಜಿಲ್ಲೆಯನ್ನಾಗಿಸುವುದು ನಮ್ಮ ಗುರಿ.ಇದಕ್ಕೆ ಕುಂದಾಪುರ ಹೆಗಲು ಕೊಡಲಿದೆ ಎಂದರು.

ಕುಂದಾಪುರದ ಕುಂದೇಶ್ವರ ರಸ್ತೆಯಲ್ಲಿ 60-70 ಅಂಗಡಿ ಮಾಲೀಕರು ದೃಷ್ಟಿ ಯೋಜನೆಯ ಗ್ರೂಪ್ ರಚನೆಗೊಂಡಿದ್ದು ಸಿಬ್ಬಂದಿ ಮಾನಿಟರ್ ಮಾಡಲಿದ್ದಾರೆ. ಇಡೀ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಯ ಸಂಪರ್ಕದಲ್ಲಿರುತ್ತಾರೆ. ಮುಂದೆ ಚಿಕನ್ ಸಾಲ್ ರಸ್ತೆ, ಫೆರಸ್ತೆಯ ವಠಾರದಲ್ಲಿ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ಕುಂದೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಾಸುದೇವ ಯಡಿಯಾಳ, ಕುಂದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಕುಂದಾ ಪುರ ಭೂಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಟಿಎಪಿಸಿ ಎಂಎಸ್ ಬ್ಯಾಂಕ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪುರಸಭೆ ಸದಸ್ಯ ಗಿರೀಶ್ ಜಿ. ಕೆ. ಉಪಸ್ಥಿತರಿದ್ದರು.
ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪಿಎಸ್‌ಐ ನಂಜಾ ನಾಯ್ ನಾಯ್ಕ ಸ್ವಾಗತಿಸಿ, ಪೊಲೀಸ್ ಸಿಬ್ಬಂದಿ ಮಧುಸೂದನ ಕಾರ್ಯಕ್ರಮ ನಿರ್ವಹಿಸಿದರು.


ಬೈಂದೂರಿನಲ್ಲಿ ದೃಷ್ಠಿ ಯೋಜನೆಗೆ ಚಾಲನೆ:
ಜಿಲ್ಲಾ ಪೊಲೀಸ್, ಆರಕ್ಷಕ ಠಾಣೆ ಬೈಂದೂರು ವತಿಯಿಂದ ಬೈಂದೂರು ರೋಟರಿ ಭವನದಲ್ಲಿ ದೃಷ್ಟಿ ಯೋಜನೆಗೆ ಚಾಲನೆ ನೀಡಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ದೃಷ್ಟಿ ಎಂಬ ವಿನೂತನ ಕ್ರಮ ಅಳವಡಿಸುತ್ತಿದ್ದು, ಬೈಂದೂರು ಆರಕ್ಷಕ ಠಾಣೆ ವ್ಯಾಪ್ತಿಯ ಬೈಂದೂರು ಮತ್ತು ಯಡ್ತರೆ ವ್ಯಾಪ್ತಿಯಲ್ಲಿ ಅನುಷ್ಠಾನ ಗೊಂಡಿದೆ. ಮುಂದಿನ ದಿನಗಳಲ್ಲಿ ಇದನ್ನು ಜಿಲ್ಲೆಗೆ ವಿಸ್ತರಿಸುವ ಚಿಂತನೆಯಿದೆ ಎಂದರು.
ಜಂಬೋಸ್ಟಾರ್ ಸೆಕ್ಯುರಿಟಿ ಮತ್ತು ಫೆಸಿಲಿಟಿ ಗ್ವಿಸ್ ಸಂಸ್ಥೆಯ ಎಚ್.ಆರ್.ಕಾವ್ಯ ಮಾತನಾಡಿ, ತರಬೇತಿ ಪಡೆದ ಗಾರ್ಡ್ ನೇಮಕ ಮಾಡಿ ಕಳ್ಳತನ ಸೇರಿದಂತೆ ಅಪರಾಧಗಳನ್ನು ತಡೆಯುವ ಯೋಜನೆಯೇ ದೃಷ್ಟಿ ಇದಕ್ಕೆ ಬೇಕಾದ ಮಾನವ ಸಂಪನ್ಮೂಲಗಳನ್ನು ನಮ್ಮ ಸಂಸ್ಥೆ ಪೂರೈಕೆ ಮಾಡುತ್ತದೆ ಎಂದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ, ಬೈಂದೂರು ಸೇನೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯರಾದ ನಾಗರಾಜ ಗಾಣಿಗ, ನಾಗರಾಜ ಶೆಟ್ಟಿ ಸದಾಶಿವ ಡಿ. ಪಡುವರಿ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಕುಂದಾಪುರ ಪೊಲೀಸ್ ಉಪಾಧೀಕ್ಷಕ ಎಚ್.ಡಿ. ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ತಿಮ್ಮೇಶ ಬಿ.ಎನ್. ಸ್ವಾಗತಿಸಿ, ಅರುಣ್‌ಕುಮಾರ್ ಶಿರೂರು ನಿರೂಪಿಸಿ, ನವೀನ್ ಪಿ. ಬೋರ್ಕರ್ ವಂದಿಸಿದರು.
















