ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರ ಸ್ಪರ್ಧೆಗಳ ಅಂಗವಾಗಿ ಇಂಡಿಯನ್ ಪಬ್ಲಿಕ್ ಸ್ಕೂಲ್ ಜ್ಞಾನದೇಗುಲ ಎಸ್.ವಿ ಎಸ್ ಕ್ಯಾಂಪಸ್ ತುರುವೆಕೆರೆ ತುಮಕೂರು ಇವರ ಪ್ರಾಯೋಜಕತ್ವದಲ್ಲಿ ಪಡುಕೋಣೆ ದ್ರಾವಿಡ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್ ಯಲಹಂಕ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ, ಹಟ್ಟಿಅಂಗಡಿಯ 10ನೇ ತರಗತಿಯ ವಿದ್ಯಾರ್ಥಿ ಶುಭನ್ ಪುತ್ರನ್ ಭಾಗವಹಿಸಿ 62 ಕೆಜಿ ವಿಭಾಗದಲ್ಲಿ ಪ್ರಥಮಸ್ಥಾನವನ್ನು ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ತಂಡಕ್ಕೆ ಆಯ್ಕೆಯಾಗಿದ್ದು, ಶಾಲೆಗೆ ಕೀರ್ತಿಯನ್ನು ತಂದಿದ್ದಾನೆ.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲೆಯ ಪ್ರಾಂಶುಪಾಲರಾದ ಶರಣ ಕುಮಾರ ವಿದ್ಯಾರ್ಥಿಯನ್ನು ಹಾಗೂ ತರಬೇತಿ ನೀಡಿ ಪ್ರೋತ್ಸಾಹಿಸಿದ ದೈಹಿಕ ಶಿಕ್ಷಣ ಶಿಕ್ಷಕರನ್ನೂ, ಅಭಿನಂದನೆ ಸಲ್ಲಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪ್ರತಿಭೆಯು ಸುಪ್ತವಾಗಿರುತ್ತದೆ. ಯಾವ ವಿದ್ಯಾರ್ಥಿಯಲ್ಲಿ ಯಾವ ರೀತಿಯ ಪ್ರತಿಭೆ ಇರುವುದೆಂದು ತಿಳಿಯಲು ಅಸಾಧ್ಯ. ಅವರಿಗೆ ಯೋಗ್ಯ ವೇದಿಕೆಯನ್ನು ಒದಗಿಸಿಕೊಡುವುದಷ್ಟೇ ಪೋಷಕರ ಹಾಗೂ ಶಾಲೆಯ ಜವಾಬ್ದಾರಿ. ಶುಭನ್ ಪುತ್ರನ್ ಇಂತಹ ಸಾಧನೆ ನಡೆಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯನ್ನುಂಟು ಮಾಡಿದೆ. ವಿದ್ಯಾರ್ಥಿಗಳು ಯೋಗ್ಯ ಅವಕಾಶವನ್ನು ಬಳಸಿಕೊಂಡು ಮಿನುಗುವ ತಾರೆಗಳಾಗಬೇಕು ಎಂದು ಹರ್ಷ ವ್ಯಕ್ತಪಡಿಸಿದರು.
ಈತ ಹಟ್ಟಿಯಂಗಡಿಯ ನಿವಾಸಿಗಳಾದ ನಿತ್ಯಾನಂದ ಪುತ್ರನ್ ಮತ್ತು ಸುಶೀಲಾ ದಂಪತಿಗಳ ಸುಪುತ್ರನಾಗಿದ್ದಾನೆ.










