ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಬೈಂದೂರು ಉತ್ಸವ 2026ರ ಪೂರ್ವಭಾವಿಯಾಗಿ ಬೆಂಗಳೂರಿನ ಬೈಂದೂರು ಉತ್ಸವ ಸಮಿತಿ ನೇತೃತ್ವದಲ್ಲಿ ವಿಜಯನಗರದ ಬಂಟರ ಸಂಘದಲ್ಲಿ ಉತ್ಸವ ಪೂರ್ವಭಾಗಿ ಸಭೆ, ‘ವಿದ್ಯಾ ಬೆಳಕು’ ಯೋಜನೆ ಪೋಸ್ಟರ್ ಅನಾವರಣ ಹಾಗೂ ಅಧಿಕೃತ ಆಹ್ವಾನ ಪತ್ರಿಕೆ ಬಿಡುಗಡೆ ಸಮಾರಂಭವು ನಡೆಯಿತು.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಉತ್ಸವಗಳು ಕೇವಲ ಆಚರಣೆಗೆ ಸೀಮಿತವಾಗಿಲ್ಲ. ಸುಶಿಕ್ಷಿತ ಹಾಗೂ ಸುರಕ್ಷಿತ ಬೈಂದೂರು ನಿರ್ಮಾಣ ನಮ್ಮ ನಿಜವಾದ ಗುರಿ. ಆರೋಗ್ಯವೇ ಭಾಗ್ಯ. ಬೈಂದೂರು ಜನತೆಗೆ ಇನ್ಸುರೆನ್ಸ್ ಸೌಲಭ್ಯ ಒದಗಿಸುವ ಗುರಿ ಶ್ಲಾಘನೀಯ. ಅನಾರೋಗ್ಯ ಮುಕ್ತ ಬೈಂದೂರು ನಿರ್ಮಾಣಕ್ಕಾಗಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಹಕಾರದಿಂದ ಎಲ್ಲರಿಗೂ ಇನ್ಸುರೆನ್ಸ್ ಮಾಡಿಸುವ ಅಭಿಯಾನ ಯಶಸ್ವಿಯಾಗಬೇಕು. ಬೈಂದೂರಿನ ಅಭಿವೃದ್ಧಿಗೆ ಸಣ್ಣ ಉದ್ದಿಮೆಗಳ ಪಾತ್ರವೂ ದೊಡ್ಡದು. ಉತ್ಸವದ ಮೂಲಕ ಸಂಜೀವಿನಿ ಸ್ವಸಹಾಯ ಸಂಘಗಳಿಂದ ಸ್ಥಳೀಯ ಉದ್ಯಮ, ಉದ್ಯೋಗ ಕಲೆ, ಶಿಕ್ಷಣ, ಆರೋಗ್ಯಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬೈಂದೂರು ಉತ್ಸವ ಸಮಿತಿ ಬೆಂಗಳೂರು ಗೌರವಾಧ್ಯಕ್ಷ ಟಿ. ಶಿವಾನಂದ ಶೆಟ್ಟಿ ಮಾತನಾಡಿ, ಬೈಂದೂರು ಉತ್ಸವ ಸಮಿತಿ ಬೆಂಗಳೂರು ತಂಡವು ಊರಿನ ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ಭದ್ರತೆಗಾಗಿ ಕೆಲಸ ಮಾಡುತ್ತಿದೆ. ವಿದ್ಯಾ ಬೆಳಕು ಯೋಜನೆಗೆ ಪೋಷಕರಾಗಲು ಅನೇಕರು ಆಸಕ್ತಿ ತೋರಿದ್ದಾರೆ. ಬೆಂಗಳೂರು ಮಾತ್ರವಲ್ಲ, ಹೊರರಾಜ್ಯ,ವಿದೇಶದಲ್ಲಿರುವ ಬೈಂದೂರಿನ ಹೃದಯಗಳೂ ಈ ಕಾರ್ಯಕ್ಕೆ ಕೈ ಜೋಡಿಸುತ್ತಿವೆ ಎಂದರು.
ಸಣ್ಣ ಉದ್ದಿಮೆಗಳು & ಬೇಕರಿ ಒಕ್ಕೂಟದ ಅಧ್ಯಕ್ಷ ಡಿ.ಬಿ. ಪ್ರತಾಪ ಶೆಟ್ಟಿ ಮಾತನಾಡಿ, ಒಂದು ಊರು ಬೆಳೆಯಬೇಕಾದರೆ ಮೊದಲು ಅದರ ಮಕ್ಕಳು ಬೆಳೆಯಬೇಕು. ಶಿಕ್ಷಣಕ್ಕೆ ನೆರವು ನೀಡುವ ಕಾರ್ಯಕ್ಕೆ ನಾನು ಸದಾ ಬದ್ಧ. ವಿದ್ಯಾ ಬೆಳಕು ಯೋಜನೆಗೆ ಇನ್ನಷ್ಟು ಉದ್ಯಮಿಗಳು, ದಾನಿಗಳು ಪೋಷಕರಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಯುವ ಉದ್ಯಮಿ ಸುದೀರ್ ಶೆಟ್ಟಿ ಬೆಳ್ಳಾಲ ಮಾತನಾಡಿ, ಯುವ ಸಮುದಾಯಕ್ಕೆ ಉದ್ಯೋಗ, ಅವಕಾಶ, ಮಾರ್ಗದರ್ಶನ ಅಗತ್ಯ. ಬೈಂದೂರು ಉತ್ಸವವು ಯುವಶಕ್ತಿಗೆ ವೇದಿಕೆ ನೀಡುವ ಜೊತೆಗೆ, ಶಿಕ್ಷಣ ಮತ್ತು ಆರೋಗ್ಯ ಭದ್ರತೆಗೂ ಆದ್ಯತೆ ನೀಡುತ್ತಿರುವುದು ಅತ್ಯಂತ ಮಹತ್ವದ ಬೆಳವಣಿಗೆ ಎಂದರು.
ಮಾತೃ ಸಾಗರ ಸಂಸ್ಥೆಯ ಕೃಷ್ಣ ಪೂಜಾರಿ ಹಾಗೂ ಎಸ್.ಎಂ. ಚಂದ ದೇವಾಡಿಗ, ಉದ್ಯಮಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂತೋಷ್ ಮೂಡುಬಗೆ, ಗೀತಾ ಶೆಟ್ಟಿ, ಸತೀಶ್ ಶೆಟ್ಟಿ, ಉಮೇಶ್, ಶೇಖರ್ ಕಾಲ್ತೋಡು ಮತ್ತು ಇತರರು ವಿದ್ಯಾ ಬೆಳಕು ಯೋಜನೆಗೆ ಪೋಷಕರಾಗಿ ನಿಲ್ಲಲು ನಮ್ಮ ಸಂಪೂರ್ಣ ಬೆಂಬಲವಿದೆ. ಇದು ಬೈಂದೂರಿನ ಮಕ್ಕಳ ಕನಸುಗಳಿಗೆ ಬೆಳಕು ನೀಡುವ ಕಾರ್ಯ ಎಂದು ಒಕ್ಕೊರಲಾಗಿ ಶ್ಲಾಘಿಸಿ ಅನಿಸಿಕೆ ಹಂಚಿಕೊಂಡರು.
ನಾಗರಾಜ್ ಶೆಟ್ಟಿ ನೈಕಂಬ್ಳಿಯವರು ಪ್ರಸ್ತಾವಿಕ ಮಾತುಗಳನ್ನಾಡಿದರು. ಚರಣ್ ಬೈಂದೂರು ಕಾರ್ಯಕ್ರಮ ನಿರೂಪಿಸಿದರು. ವಿಜು ಉಪ್ಪುಂದ ಧನ್ಯವಾದ ಅರ್ಪಿಸಿದರು.















