ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಲ್ಲಿ ಧೈರ್ಯ ತುಂಬಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ ಪ್ರಯತ್ನ ಶಿಕ್ಷಕರಿಂದ ಆಗಬೇಕಿದೆ. ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ ಫಲಿತಾಂಶ ವೃದ್ಧಿಗೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಿ ಅವರಿಗೆ ಮಾಹಿತಿ ನೀಡಲಾಗುತ್ತಿದ್ದು, ಈ ಕಾರ್ಯಾಗಾರದ ಪ್ರಯೋಜನ ವಿದ್ಯಾರ್ಥಿಗಳಿಗೆ ದೊರೆಯುವಂತಾಗಬೇಕು ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್. ಶೆಟ್ಟಿ ಹೇಳಿದರು.
ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯ ಮತ್ತು ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಗಂಗೊಳ್ಳಿ ಇವರ ಸಹಯೋಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿಷಯ ಶಿಕ್ಷಕರ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ಎಸ್.ವಿ. ವಿದ್ಯಾ ಸಂಸ್ಥೆಗಳ ಸಂಚಾಲ ಎನ್. ಸದಾಶಿವ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ.ಸಿ., ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾದ ಹರೀಶ್ಚಂದ್ರ, ರಮೇಶ ಕುಲಾಲ್, ಅಶೋಕ ಸೋಮಯಾಜಿ, ನಾಗರತ್ನ, ಗೋಪಾಲ ಸೋಮಯಾಜಿ, ಗಾಯತ್ರಿ ಅವರು ಕಾರ್ಯಾಗಾರ ನಡೆಸಿಕೊಟ್ಟರು. ಎಸೆಸ್ಸೆಲ್ಸಿ ನೋಡೆಲ್ ಆಧಿಕಾರಿ ರಾಜು ಖಾರ್ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಉಪಪ್ರಾಂಶುಪಾಲ ಗೋಪಾಲ ದೇವಾಡಿಗ ಸ್ವಾಗತಿಸಿ, ಶಿಕ್ಷಕರಾದ ಆದಿನಾಥ ಕಿಣಿ ಕಾರ್ಯಕ್ರಮ ನಿರ್ವಹಿಸಿ, ಲವಿನಾ ಸಾವಿಯಾ ಸಿಕ್ವೇರಾ ವಂದಿಸಿದರು.










