ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸುಮಾರು 25ಕ್ಕೂ ಹೆಚ್ಚು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ಕೆ. ಮನೋಹರ ಪೈ ( 81 ವರ್ಷ) ಅವರು ಶುಕ್ರವಾರ ದೈವಾಧೀನರಾದರು. ಕಾಲೇಜಿನ ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯವರು ಮತ್ತು ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಶೃಂದ್ಧಾಂಜಲಿ ಸಭೆ ನಡೆಸಿ ಪುಷ್ಪ ನಮನ ಸಲ್ಲಿಸಿ ಅವರ ಆತ್ಮಕ್ಕೆ ಶೃದ್ಧಾಂಜಲಿ ಕೋರಿದರು.
ಕಾಲೇಜಿನಲ್ಲಿ 1973ರಲ್ಲಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ 2003ರಲ್ಲಿ ನಿವೃತ್ತರಾದ ಡಾ. ಕೆ. ಮನೋಹರ ಪೈ ಅವರಿಗೆ ಸಸ್ಯಶಾಸ್ತ್ರ ಕೇವಲ ವೃತ್ತಿ ವಿಷಯವಾಗಿರದೆ ಅವರ ಬದುಕಿನ ಜೀವಾಳವಾಗಿತ್ತು. ಸಸ್ಯ ಪ್ರಬೇಧಗಳ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು. ಅಲ್ಲದೇ ಕ್ರೀಡೆ, ಬರವಣಿಗೆ, ಸಂಶೋಧನೆ ಮತ್ತು ಛಾಯಾಗ್ರಹಣದ ಬಗ್ಗೆ ವಿಶೇಷ ಆಸಕ್ತಿ ಇತ್ತು. ಕಾಲೇಜಿನ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕ ಎನಿಸಿಕೊಂಡಿದ್ದರು.

ಸಂತಾಪ ಸಭೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು.ಎಸ್.ಶೆಣೈ ಮಾತನಾಡಿ, ಮನೋಹರ ಪೈ ಅವರು ತಮ್ಮ ವ್ಯಕ್ತಿತ್ವ ಮತ್ತು ಪಾಂಡಿತ್ಯದಿಂದ ವಿದ್ಯಾರ್ಥಿಗಳ ನೆಚ್ಚಿನ ಗುರು ಮತ್ತು ಆದರ್ಶ ಅಧ್ಯಾಪಕರಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಪುಷ್ಪ ಸಮರ್ಪಿಸಿ ನುಡಿನಮನ ಸಲ್ಲಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಮ್. ಗೊಂಡ ನುಡಿನಮನ ಸಲ್ಲಿಸಿದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕ ವೃಂದ ಮತ್ತು ಬೋಧಕೇತರ ಸಿಬ್ಬಂದಿಗಳು ಡಾ. ಕೆ. ಮನೋಹರ ಪೈ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.















