ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪಾಲಕ/ಪೋಷಕ-ಶಿಕ್ಷಕರ ಸಮಾಲೋಚನಾ ಸಭೆಯನ್ನು ನಡೆಸಲಾಗಿತ್ತು.
ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಕುರಿತು ಪಾಲಕ/ಪೋಷಕರಿಗೆ ಮಾಹಿತಿ ನೀಡಲು ಹಾಗೂ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕುರಿತು ಚರ್ಚಿಸುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಆರಂಭಿಸಲಾಗಿರುವ ದೈಹಿಕ ಮತ್ತು ಮಾನಸಿಕ ದೃಡತೆಯನ್ನು ಹೆಚ್ಚಿಸುವ ಚಟುವಟಿಕೆಗಳ ಕುರಿತು ಪಾಲಕ-ಪೋಷಕರಿಗೆ ವಿವರಿಸಿ ಪ್ರಾತ್ಯಕ್ಷಿಕೆಯನ್ನು ನೀಡಲಾಗಿತ್ತು.

ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಕರಾದ ಗಣೇಶ್ ನಾಯಕ್ ಅವರು ದೈಹಿಕ ಕ್ಷಮತೆಯನ್ನು ಶಾಲೆಯಲ್ಲಿ ಪರೀಕ್ಷಿಸುವ ಕ್ರಮವನ್ನು ಆರಂಭಿಸಿದ ಕುರಿತು ತಿಳಿಸಿದರು.
ನಂತರ ಎಸ್.ಜಿ.ಎಫ್.ಐ (ಭಾರತದ ಶಾಲಾ ಕ್ರೀಡಾ ಫೆಡರೇಶನ್)ಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿ ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳನ್ನು ವಿವರಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಹಲವು ಪಾಲಕರು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮುಕ್ತವಾಗಿ ತಮ್ಮ ಅನಿಸಿಕೆ ಹಾಗೂ ಸಲಹೆಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿಯವರಾದ ಸುಜಾತಾ ಸದಾರಾಮ್ ಅವರು ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕೊಡುವುದು ಎಷ್ಟು ಮುಖ್ಯ ಹಾಗೂ ಮಕ್ಕಳು ತಮ್ಮ ನಡವಳಿಕೆಯನ್ನು ಬೆಳೆಯುವ ವಾತಾವರಣದಿಂದ ಹೇಗೆ ರೂಢಿಸಿಕೊಳ್ಳುತ್ತಾರೆ ಎಂದು ಹೇಳಿದರು.
ಈ ಸಭೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದ ಶಿಕ್ಷಣ ಸಂಯೋಜಕಿಯವರಾದ ದೀಪಿಕಾ ದೇವಾಡಿಗ, ಶ್ರುತಿ, ಫರ್ನಾಝ್ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರೂಪಾ ಮತ್ತು ಜ್ಯೋತಿ ಜಿ. ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.















