ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು: ಡಾ. ಎಂ. ಮೋಹನ ಆಳ್ವ
ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೇರು ಕಲ್ಪವೃಕ್ಷವೇ ಆಗಿದೆ. ವಿಪುಲ ಭವಿಷ್ಯವನ್ನು ಹೊಂದಿರುವ ಗೇರು ಕೃಷಿಗೆ ಸಿಗುತ್ತಿರುವ ಉತ್ತೇಜನ ತುಂಬಾ ಕಡಿಮೆ. ಗೇರು ಕೃಷಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯಬೇಕಾಗಿದೆ. ಸರಕಾರಗಳು ಗೇರು ಕೃಷಿ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಗೇರು ಉದ್ಯಮದ ಮೂಲಕ ಇಂದು ಸಂಪತ್ ಕುಮಾರ್ ಶೆಟ್ಟಿ ಅವರು ಹಲವಾರು ಜನರಿಗೆ ಉದ್ಯೋಗ ನೀಡುತ್ತಿರುವುದು ಶ್ಲಾಘನಾರ್ಹವಾದ ಕೆಲಸ ಎಂದು ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಮೋಹನ ಆಳ್ವ ಹೇಳಿದರು.
ಅವರು ಇಲ್ಲಿನ ವಂಡಾರು ಬೋರ್ಡ್‌ಲ್ ಶ್ರೀ ಕೃಷ್ಣಪ್ರಸಾದ್ ಗ್ರೂಪ್ ಆಫ್ ಇಂಡಸ್ಟ್ರೀಸ್, ಶ್ರೀ ಕೃಷ್ಣಪ್ರಸಾದ್ ಆಗ್ರೋ ಪ್ರೈವೇಟ್ ಲಿಮಿಟೆಡ್ ಇದರ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಗೇರು ಕೃಷಿಯಲ್ಲಿ ಕೇವಲ ಗೇರು ಬೀಜ ಮಾತ್ರವಲ್ಲ, ಗೇರು ಹಣ್ಣು, ಗೇರು ಎಣ್ಣೆ, ಗೇರು ಸಿಪ್ಪೆಯ ಮೌಲ್ಯವರ್ಧನೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು, ಹೊಸ ಆವಿಷ್ಕಾರಗಳು ಆಗಬೇಕಾಗಿದೆ. ಬಾದಮಿ ಕೃಷಿಗೆ, ಬಾದಮಿ ಉದ್ಯಮಕ್ಕೆ ಸಿಗುವ ಮಾನ್ಯತೆಗಳು ಗೇರು ಬೀಜಕ್ಕೂ ಸಿಗುವಂತಾಗಬೇಕು. ಅದರಿಂದ ಗೇರು ಕೃಷಿಕರು, ಗೇರು ಉದ್ಯಮಗಳು ಹೆಚ್ಚು ಅಭಿವೃದ್ಧಿ ಹೊಂದಲು ಉದ್ಯೋಗವಕಾಶಗಳನ್ನು ನೀಡಲು ಸಾಧ್ಯವಾಗಲಿದೆ ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗೇರು ಉದ್ಯಮಗಳಿಗೆ ಸರಕಾರ ಪ್ರೋತ್ಸಾಹ ನೀಡಬೇಕು. ಇದರಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರ್ಕಾರದ ಆರೋಗ್ಯ ವಿಮೆಯಲ್ಲಿ ಅವಕಾಶ ನೀಡಬೇಕು ಎಂದರು.
ಕುಂದಾಪುರ ಕ್ಷೇತ್ರದ ಶಾಸಕ ಎ. ಕಿರಣ್ ಕುಮಾರ್ ಕೊಡ್ಲಿ ಶುಭ ಹಾರೈಸಿ, ಗೇರು ಉದ್ಯಮ ಸುಲಭವಲ್ಲ, ಅದು ತ೦ತಿ ಮೇಲಿನ ನಡಿಗೆ ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕಾಗುತ್ತಿದೆ. ಆ ಎಲ್ಲ ಸವಾಲುಗಳನ್ನು ಎದುರಿಸಿ ಕೃಷ್ಣಪ್ರಸಾದ್ ಇ೦ಡಸ್ಟ್ರೀಸ್ ಗುರುತಿಸಿಕೊ೦ಡಿದೆ ಎ೦ದರು.

ಕೃಷ್ಣಪ್ರಸಾದ್ ಗ್ರೂಫ್ ಆಫ್ ಇಂಡಸ್ಟ್ರೀಸ್‌ನ ಮುಖ್ಯಸ್ಥರಾದ ಸಂಪತ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಬಳಿಕ ಬೆಂಗಳೂರಿನಲ್ಲಿ ಕೆಲಸ ಮಾಡಿದೆ. ಬಳಿಕ ಎರಡು ಕಂಪೆನಿಗಳಲ್ಲಿ ದುಡಿದೆ.2012ರಲ್ಲಿ ಸಣ್ಣ ಮಟ್ಟದಲ್ಲಿ ಗೇರುಬೀಜ ಕಾರ್ಖಾನೆ ಆರಂಭಿಸಿದೆ. ಆಗ ಹಾಲಾಡಿ ಶ್ರೀನಿವಾಸ ಶೆಟ್ಟರು ನೀಡಿದ ಎರಡು ಲಕ್ಷ ರೂಪಾಯಿ ಮೂಲ ಬಂಡವಾಳವಾಯಿತು. ಉದ್ಯಮದಲ್ಲಿ ವಿಶ್ವಾಸ, ಗುರಿ, ಛಲವಿತ್ತು. ಸ್ವತಃ ನಾನೇ ದಿನ 16 ಗಂಟೆಗೂ ಹೆಚ್ಚು ಕೆಲಸ ಮಾಡಿದೆ. ಅಗಾಗಲೇ ಗೇರು ಉದ್ಯಮದಲ್ಲಿ ಅನುಭವ ಹೊಂದಿದ್ದ ಶಶಿಧರ ಶೆಟ್ಟಿ, ಶಂಕರ ಹೆಗ್ಡೆ, ನಾಗರಾಜ ಶೆಟ್ಟಿಯವರ ಮಾರ್ಗದರ್ಶನ ದೊರೆಯಿತು. ಏಳುಬೀಳುಗಳಿಗೆ ಹೆದರದೆ ಪರಿಶ್ರಮದಿಂದ ಮುನ್ನಡೆದೆ. ಉದ್ಯಮ ಹಂತಹಂತವಾಗಿ ಅಭಿವೃದ್ಧಿ ಕಂಡಿತು. ಇದರಲ್ಲಿ ನನ್ನ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ದುಡಿಮೆಯೂ ಅಡಗಿದೆ. 10 ಜನರಿಂದ ಆರಂಭವಾದ ಉದ್ಯಮ ಇವತ್ತು 3500 ಜನರಿಗೆ ಉದ್ಯೋಗ ನೀಡಿದೆ. ವಾರ್ಷಿಕ ೧೫ ಕೋಟಿ ತೆರಿಗೆಯನ್ನು ಸರಕಾರಕ್ಕೆ ಪಾವತಿಸುತ್ತಿದ್ದೇನೆ. ಕನಸು ಇನ್ನೂ ಇದೆ. 7000 ಜನರಿಗೆ ಉದ್ಯೋಗ ಕಲ್ಪಿಸಬೇಕು, ಹತ್ತು ವರ್ಷದಲ್ಲಿ 1000 ಕೋಟಿ ವ್ಯವಹಾರ ಮಾಡುವ ಗುರಿ ಇದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮಕ್ಕೆ ಸಹಕಾರ, ಮಾರ್ಗದರ್ಶನ ಮಾಡಿದ ಫೆವರೇಟ್ ಕ್ಯಾಶ್ ಇಂಡಸ್ಟ್ರೀಸ್ ಮಾಲಕರಾದ ಶಂಕರ ಹೆಗ್ಡೆ, ಶಂಕರನಾರಾಯಣ ಕ್ಯಾಶೂಸ್ ಇಂಡಸ್ಟ್ರೀಸ್ ಮಾಲಕರಾದ ಶಶಿಧರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಕೃಷ್ಣ ಪ್ರಸಾದ್ ಸ್ಟೀಲ್ ನ ಜನರಲ್ ಮೆನೇಜರ್ ಶ್ರೀನಿವಾಸ ಶೆಟ್ಟಿ ಹಾಗೂ ಇಲೆಕ್ಟಿಕಲ್ ಇನ್ಸಾರ್ಜ್ ಅನೇಶ್ ಅವರಿಗೆ ಸ್ವಿಪ್ಟ್ ಕಾರು, ಕೃಷ್ಣ ಪ್ರಸಾದ್ ಆಗೋ ಇಂಡಸ್ಟ್ರೀಸ್ ಸೇಲ್ಸ್ ಮೆನೇಜರ್ ಮೈಕಲ್ ರೋಷನ್ ಅವರಿಗೆ ಬೆಲೆನೋ ಕಾರು, ಕೃಷ್ಣಪ್ರಸಾದ್ ಕ್ಯಾಕ್ಯೂಸ್ ಪರ್ಚೇಸ್ ಹೆಡ್ ಚೈತ್ರಾ ಹಾಗೂ ಪ್ರೊಡಕ್ಷನ್ ಮೆನೇಜರ್ ಆಶಾ ಇವರಿಗೆ ಚಿನ್ನದ ಉಡುಗೊರೆ, ಐವರು ಸಿಬ್ಬಂದಿಗಳಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.
ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ ಶೆಟ್ಟಿ, ಬೈಂದೂರು ಕ್ಷೇತ್ರದ ಮಾಜಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ, ಉದ್ಯಮಿ ದಿನೇಶ ಹೆಗ್ಡೆ ಮೊಳಹಳ್ಳಿ, ಬಡಗಬೆಟ್ಟು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ಕೃಷ್ಣ ಮೋಹನ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಥ್ವಿರಾಜ ಶೆಟ್ಟಿ ಬಿಲ್ಲಾಡಿ, ಮುಡುಗಿಳಿಯಾರು ಜನಸೇವಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ವಸಂತ ಗಿಳಿಯಾರ್, ಕರ್ನಾಟಕ ಗೋಡಂಬಿ ತಯಾರಿಕ ಸಂಘದ ಅಧ್ಯಕ್ಷ ಎ.ಕೆ ರಾವ್, ಹಿರಿಯ ಆಗಮ ಪಂಡಿತರಾದ ಸುಧೀರ್ ಅಡಿಗ ಉಪಸ್ಥಿತರಿದ್ದರು.
ಕೃಷ್ಣಪ್ರಸಾದ್ ಕ್ಯಾಪ್ಟಸ್ ಇಂಡಸ್ಟ್ರೀಸ್ ನೌಕರರು ಪ್ರಾರ್ಥನೆ ಮಾಡಿದರು. ಡಾ. ಜನಾರ್ದನ್ ಹಾವಂಜೆ ಅವರು ರಚಿಸಿರುವ ಕಲಾಕೃತಿಗಳನ್ನು ಅತಿಥಿಗಳಿಗೆ ನೀಡುವ ಮೂಲಕ ಸಂಪತ್ ಕುಮಾರ್ ಶೆಟ್ಟಿ ಸ್ವಾಗತಿಸಿಕೊಂಡರು. ಪತ್ರಕರ್ತ ರಾಜೇಶ್ ಕೆ.ಸಿ. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಸಭಾಕಾರ್ಯಕ್ರಮದ ಪೂರ್ವದಲ್ಲಿ ನಾಟ್ಯವಸಂತ ನಾಟ್ಯಾಲಯ ಕುಂದಾಪುರ ಇವರಿಂದ ನೃತ್ಯ ಸಿಂಚನ, ಸಭಾ ಕಾರ್ಯಕ್ರಮದ ಬಳಿಕ ಪೂರ್ಣಚಂದ್ರ ಯಕ್ಷಕಲಾ ಪ್ರತಿಷ್ಠಾನ ಕೊಂಡದಕುಳಿ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ದಕ್ಷಯಜ ಪ್ರದರ್ಶನಗೊಂಡಿತು.















