ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಧರ್ಮದರ್ಶಿಗಳೂ ಮತ್ತು ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ನಿರ್ಮಾತೃಗಳಾದ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಸಂಸ್ಮರಣೆಯ ಅಂಗವಾಗಿ ಸಂಸ್ಥಾಪಕರ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಆರಾಧನೆ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಬದುಕು ಮತ್ತು ಸಾಧನೆಯ ವಿವಿಧ ಮಜಲುಗಳನ್ನು ಸಂಸ್ಮರಿಸಲಾಯಿತು. ಮುಂಜಾನೆಯ ಅವಧಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲ್ಪಟ್ಟವು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರಿನ ಖ್ಯಾತ ಸಾಹಿತಿಗಳಾದ ಡಾ. ಗಜಾನನ ಶರ್ಮರು ಮಾತನಾಡಿ, ಅಕ್ಕಿಯಿಂದ ಅನ್ನವನ್ನು ಮೊದಲಾರು ಕಂಡವರು ಎಂಬಂತೆ ಮಾನವನ ಸಾಧನೆಯ ಪ್ರತಿಹೆಜ್ಜೆಯನ್ನು ಬೋಧಿಸಿದವರ್ಯಾರು ಎಂದು ತಿಳಿಯುವ ಗೊಡವೆಗೆ ಜನ ಹೋಗುವುದಿಲ್ಲ. ಆದರೂ ಪೂರ್ವಜರ ಸ್ಮರಣೆ ಮತ್ತು ಇತಿಹಾಸ ಅರಿಯದವನು ಮುಂದಿನ ಹೆಜ್ಜೆಯನ್ನಿಡಲಸಾಧ್ಯ. ಆದ್ದರಿಂದ ಸಂಸ್ಮರಣೆ ಅತ್ಯಗತ್ಯ. ಸಮಾಜದ ಸರ್ವರೂ ವಿದ್ಯೆಯನ್ನು ಅರಿತು ಬಾಳಬೇಕೆಂದು ಶ್ರಮಿಸಿದವರು. ವೇದಮೂರ್ತಿ ರಾಮಚಂದ್ರ ಭಟ್ಟರು, ಎಲ್. ಟಿ. ತಿಮ್ಮಪ್ಪ ಹೆಗಡೆ ಅವರು ಮತ್ತು ಡಾ. ಹಟ್ಟಿಅಂಗಡಿ ಶಾಂತಾರಾಮರು ಸರ್ ಎಮ್. ವಿಶ್ವೇಶ್ವರಯ್ಯನವರ ಜೀವನದಲ್ಲಿ ಅಮೇರಿಕಾದಲ್ಲಿ ದೇಶನಿಂದನೆಯ ಮಾತನ್ನು ಕೇಳಿ ನೊಂದು ಅದರ ನಂತರ ಅವರು ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸಿದರು. ಅದರಂತೆ ಬೆಳೆಯುತ್ತಿರುವ ಭಾರತ ನಮ್ಮೆಲ್ಲರ ಹೆಮ್ಮೆಯ ದೇಶವಾಗಿದೆ. ಎಂದು ಎಳೆ ಎಳೆಯಾಗಿ ಜೀವನಾನುಭವದ ಮೂಲಕ ತಿಳಿ ಹೇಳಿದರು.
ಇನ್ನೋರ್ವ ಮುಖ್ಯಅತಿಥಿಗಳಾದ ಹಿರಿಯ ಸಾಹಿತಿಗಳಾದ ಹೆಚ್. ದುಂಡಿರಾಜ್ ಮಾತನಾಡಿ, ಹಟ್ಟಿಕುದ್ರು ಎಂದರೆ ಎಲ್ಲಿ ಎಂದರೆ ಆಗ ಹಟ್ಟಿಅಂಗಡಿಯ ಪಕ್ಕದ ಊರು ಎಂದು ಬಹಳ ಜನರಿಗೆ ತಿಳಿಸುತ್ತಿದ್ದ ನನಗೆ ಹಟ್ಟಿಅಂಗಡಿಯ ಸಿದ್ಧಿವಿನಾಯಕ ದೇವಸ್ಥಾನ ಮತ್ತು ಶಾಲೆಗಳ ಮೇಲೆ ಅಪಾರ ಹೆಮ್ಮೆ ಇದೆ. ಮಕ್ಕಳು ಕೇವಲ ಪಠ್ಯವಿಷಯಗನ್ನಷ್ಟೇ ಅಭ್ಯಾಸ ಮಾಡದೇ ಭಾರತೀಯ ಸಂಸ್ಕೃತಿಯನ್ನೂ ಅಭ್ಯಾಸ ಮಾಡುವಂತಾಗಬೇಕು. ಸಾಹಿತ್ಯ-ಕಲಾ ಕ್ಷೇತ್ರ ಪ್ರಕಾರಗಳು ಉದ್ಯೋಗ ನೀಡಿದರೂ ನೀಡದಿದ್ದರೂ ನಮಗೆ ನಮ್ಮದೇ ಆದ ವಿಶೇಷ ವ್ಯಕ್ತಿತ್ವವನ್ನು ನೀಡುತ್ತವೆ. ಸಮಾಜ ಗುರುತಿಸುವಂತೆ ಬಾಳಲು ಸಹಕರಿಸುತ್ತವೆ. ಆದ್ದರಿಂದ ಮಕ್ಕಳಲ್ಲಿರುವ ಪಠ್ಯೇತರ ಚಟುವಟಿಕೆಗಳಲ್ಲಿರುವ ಆಸಕ್ತಿಯನ್ನು ಗುರುತಿಸಿ, ಪೋಷಿಸಬೇಕು ಎಂದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳೂ ಮತ್ತು ಶಾಲಾ ಪ್ರಾಂಶುಪಾಲರೂ ಆದ ಶರಣಕುಮಾರ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ವೇದಮೂರ್ತಿ ಹೆಚ್. ರಾಮಚಂದ್ರ ಭಟ್ಟರ ಏಳನೆಯ ವರ್ಷದ ಸಂಸ್ಮರಣೆ ಇದು. ವೇದಮೂರ್ತಿ ಹೆಚ್ ರಾಮಚಂದ್ರ ಭಟ್ಟರು ಸಿದ್ಧಿವಿನಾಯಕನ ಪ್ರೇರಣೆಯಂತೆ ಈ ವಿದ್ಯಾಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸಿದ್ಧಿವಿನಾಯಕ ದೇವಸ್ಥಾನ ಶಿಲಾಮಯವಾದ ನಂತರ ಉಳಿದ ಹಣದಿಂದ, ಎಲ್ ಟಿ ತಿಮ್ಮಪ್ಪ ಹೆಗಡೆ, ಹೆಚ್ ಶಾಂತಾರಾಮರ ಸಹಾಯ, ಸಲಹೆ, ಪ್ರೇರಣೆ, ಮಾರ್ಗದರ್ಶನಗಳಿಂದ, ಸದಾನಂದ ಮಯ್ಯರಂತಹ ಉದಾರ ದಾನಿಗಳ ಕೊಡುಗೆಯಿಂದ ಮೈತಳೆದ ಸಂಸ್ಥೆ ಇದಾಗಿದೆ. ಹಿರಿಯರ ಅಪೇಕ್ಷೆಯಂತೆ ಸಂಸ್ಥೆ ಉತ್ತಮ ಸಂಸ್ಕಾರಯುತ ಮಕ್ಕಳನ್ನು ಸಮಾಜಕ್ಕೆ ನೀಡುತ್ತಾ ಬಂದಿರುವುದು ನಮ್ಮ ಹೆಮ್ಮೆ. ಇಂದು ’ಕೂಟಾಕ್ಷ’ ಎಂಬ ಹೆಸರಿನಲ್ಲಿ ಚದುರಂಗದ ಆಟದ ಕ್ರೀಡಾಂಗಣವನ್ನೂ, ’ಊರ್ಜಾ’ ಎಂಬ ಹೆಸರಿನ ಚಿಕ್ಕ ಮಕ್ಕಳ ಆಟದ ಸ್ಥಾನಗಳನ್ನು ಉದ್ಘಾಟಿಸಿದ್ದೇವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿ ನಮ್ಮ ಸಂಸ್ಥೆಯ ಧ್ಯೇಯವಾಗಿದೆ ಎಂದು ತಿಳಿಸಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದಮೂರ್ತಿ ಹೆಚ್. ಬಾಲಚಂದ್ರ ಭಟ್ಟರು ಮಾತನಾಡುತ್ತಾ ಸಿದ್ಧಿವಿನಾಯಕನ ಕೃಪೆಯಿಂದ ಪೋಷಕರ ಸಹಕಾರದಿಂದ ಸಂಸ್ಥೆ ಇನ್ನಷ್ಟು ಸಾಧನೆಗಳನ್ನು ಮಾಡುತ್ತಾ ಸಾಗಬೇಕಾಗಿದೆ ಎಂದು ತಿಳಿಸಿದರು.
ಶ್ರೀ ಸಿದ್ಧಿಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣ ರಾವ್ ಮಾತನಾಡುತ್ತಾ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರ ಆಯ್ಕೆ ಬಹಳ ಕಷ್ಟಕರವಾಗಿದೆ. ವಿದ್ಯಾರ್ಥಿಗಳು ತಾವು ಅರಿತ ವಿದ್ಯೆಯನ್ನು ಮತ್ತೊಬ್ಬರಿಗೆ ನೀಡುವ ಇಂತಹ ವೃತ್ತಿಗಳನ್ನೂ ಜೀವನದಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್ ಟಿ ತಿಮ್ಮಪ್ಪನವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ವಿದ್ಯಾಭ್ಯಾಸದ ಫಲಿತಾಂಶಪತ್ರವೆಂಬುದು ಕೆಲಸ ಸಿಗುವ ತನಕ ಮಾತ್ರ ಉಪಯೋಗಕ್ಕೆ ಬರುತ್ತದೆ. ಕಲಿತ ವಿದ್ಯೆ, ಸಂಸ್ಕಾರಗಳು ಜೀವನದಲ್ಲಿ ಪ್ರತಿಕ್ಷಣವೂ ಉಪಯೋಗಕ್ಕೆ ಬರುತ್ತದೆ. ನಮ್ಮೀ ಶಾಲೆಯನ್ನು ಉತ್ತಮವಾದ ಶಿಸ್ತುಬದ್ಧವಾದ ಶಾಲೆಯನ್ನಾಗಿ ಬೆಳೆಸುತ್ತಿರುವ ಬಗ್ಗೆ ಹೆಮ್ಮೆ ಇದೆ ಎಂದರು.
ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ಸ್‌ನ ರಾಜ್ಯ ಸಂಸ್ಥೆ ನಡೆಸುವ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಭಾಗವಹಿಸಿದ್ದ 6 ಮಂದಿ ವಿದ್ಯಾರ್ಥಿಗಳು ರಾಜ್ಯಪಾಲರಿಂದ ಕೊಡಲ್ಪಡುವ ರಾಜ್ಯ ಪುರಸ್ಕಾರ ಪದವಿ ಹಾಗೂ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಅವರನ್ನು ಹಾಗೂ ಶಿಕ್ಷಕರನ್ನು, 2025-26ನೇ ಸಾಲಿನ ಅಭ್ಯುತ್ಥಾನ ಕಾರ್ಯಗಳಲ್ಲಿ ವಿಶೇಷ ಸಾಧನೆಗೈದ ಅಧ್ಯಾಪಕರನ್ನು, ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾದ ಮಾಣಿಕ್ಯ ಡೆಂಗಿ, ಮತ್ತು ಶುಭನ್ ಪುತ್ರನ್‌ರನ್ನು ಸನ್ಮಾನಿಸಲಾಯಿತು. ವೇದಮೂರ್ತಿ ರಾಮಚಂದ್ರ ಭಟ್ಟರ ಭಾವಚಿತ್ರಕ್ಕೆ ರಂಗು ತುಂಬಿದ ರಂಜಿತಾ ಜಿ ಆಚಾರ್ಯರನ್ನು ಸನ್ಮಾನಿಸಲಾಯಿತು. ದಿ ಗ್ರೀನ್ ಸ್ಕೂಲ್ ಕಾರ್ನಿವಲ್ 2026ರಲ್ಲಿ ಉತ್ತಮ ಪ್ರತಿಭೆ ತೋರಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಯಿತು.
ಸಂಸ್ಥಾಪಕರ ಧರ್ಮಪತ್ನಿ ರಮಾದೇವಿ ಆರ್ ಭಟ್, ಶಾಲಾ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳೂ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ರಿಜಿಸ್ಟಾರ್ ಆದ ಎನ್.ಪಿ. ನಾರಾಯಣ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತ ಸದಾರಾಮ್, ಪೋಷಕರು, ಅಭಿಮಾನಿವೃಂದದವರು, ಶಿಕ್ಷಕ-ಶಿಕ್ಷಕೇತರ ವೃಂದದವರು ಮತ್ತು ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಾದ ಗಣೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ, ಶಾಲೆಯ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಸ್ವಾಗತಿಸಿ, ಶಿಕ್ಷಕಿ ಶಶಿಕಲಾ ಶೆಟ್ಟಿ ವಂದಿಸಿದರು.
















