ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಾಗಾರಾಧನೆಯಿಂದ ಸಮಾಜದ ಉದ್ಧಾರಗೊಳ್ಳುವ ಜತೆಗೆ ಸೌಹಾರ್ದತೆಯನ್ನು ಸಾರುತ್ತದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ಸಿ.ಎ. ದೇವಾನಂದ ಹೇಳಿದರು.
ಅವರು ಸಾಸ್ತಾನದ ಚೆಲ್ಲೆಮಕ್ಕಿ ಶ್ರೀ ನಾಗಬನ ಇದರ ಪುನರ್ ನಿರ್ಮಾಣ ಜೀರ್ಣೋದ್ಧಾರ ಹಾಗೂ ವರ್ಧಂತಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಆಚರಣೆಗಳಿರಬಹುದು ಅಲ್ಲಿ ಶ್ರದ್ಧೆ ಮತ್ತು ಭಕ್ತಿಯ ಜತೆಗೆ ನಂಬಿಕೆಯಿಂದ ದೇವರಿಗೆ ಸೇವೆ ಸಲ್ಲಿಸಿದರೆ ಅವನ ಶ್ರೀರಕ್ಷೆ ಸದಾ ಭಕ್ತರ ಮೇಲಿರುತ್ತದೆ. ಈ ಕಾರ್ಯದೊಂದಿಗೆ ಸಾಧಕರನ್ನು ಗುರುತಿಸುವ ಕಾಯಕ ಕೂಡಾ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲ್ಲದೆ ಸಿಎ ಪರೀಕ್ಷೆಯನ್ನು ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಂದಾರ್ತಿ ದೇಗುಲದ ಮಾಜಿ ಟ್ರಸ್ಟಿ ಶಂಭು ತಿಂಗಳಾಯ ಅವರನ್ನು ಅಭಿನಂದಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ನಾಗಬನದ ಅಧ್ಯಕ್ಷರಾದ ಸುಧಾಕರ್ ಜಿ.ಆರ್. ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ಶ್ರೀ ವೇಣುಗೋಪಾಲಕೃಷ್ಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ಗಾಣಿಗ ಕೊಲ್ಲೂರು, ಉದ್ಯಮಿ ಮಾಧವ ಪೂಜಾರಿ ಸಾಲಿಗ್ರಾಮ, ನಾಗಬನ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಬಿರ್ತಿ, ಕೋಶಾಧಿಕಾರಿ ಪರಮೇಶ್ವರ ಗಾಣಿಗ, ಕಾರ್ಯಾಧ್ಯಕ್ಷ ದಿನಕರ್ ವಿ. ರಾವ್, ಎಲ್ ಐಸಿ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಣೇಶ್ ಜಿ. ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಪರಿಚಯಿಸಿದರು. ಕಾರ್ಯಕ್ರಮವನ್ನು ಶೈಲಜಾ ವಿವೇಕ್ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಶೇರುಗಾರ್ ವಂದಿಸಿದರು.
ಧಾರ್ಮಿಕ ಕಾರ್ಯಕ್ರಮವನ್ನು ವೇ.ಮೂ ಪ್ರಸನ್ನ ತುಂಗ ನೆರವೆರಿಸಿದರು. ನಾಗಸಂದರ್ಶನವನ್ನು ವೇ.ಮೂ ಸುಬ್ರಹ್ಮಣ್ಯ ಮಧ್ಯಸ್ಥ ಗೈದರು, ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ರಾತ್ರಿ ಮಂದಾರ್ತಿ ಮೇಳದಿಂದ ಯಕ್ಷಗಾನ ದೇವಿ ಮಹಾತ್ಮೆ ಪ್ರದರ್ಶನಗೊಂಡಿತು.
















