ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಆಯೋಜಿಸಲಾದ ಐದನೇ ಆವೃತ್ತಿಯ ‘ವಿ-ಗ್ರೋ ಬ್ಯುಸಿನೆಸ್ ಡೇ’ ಕಾರ್ಯಕ್ರಮದ ಮೊದಲನೇ ಹಂತದ ವ್ಯವಹಾರ ಯೋಜನೆಗಳ ಪ್ರಸ್ತುತಿ ಕಾರ್ಯಕ್ರಮ ವಿದ್ಯಾರ್ಥಿಗಳಿಂದ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು.
ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಡಾ. ವೀರೇಂದ್ರ ವಿ. ಶ್ಯಾನುಭೋಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಧುನಿಕ ವಿದ್ಯುನ್ಮಾನ ಯುಗದ ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಅವಕಾಶಗಳು ಕಡಿಮೆಯಾಗಿದೆ ಎಂದು ಕೈಚಲ್ಲಿ ಕುಳಿತುಕೊಳ್ಳಬೇಕಾದ ಅಗತ್ಯವಿಲ್ಲ. ವರ್ತಮಾನದ ಅವಸರಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಸೃಜನಾತ್ಮಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಹೊಸ ಆಲೋಚನೆಗಳು, ನಾವಿನ್ಯತೆ ಹಾಗೂ ಕೌಶಲಾಭಿವೃದ್ಧಿ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆಗೆ ಪೂರಕ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾ| ಕೆ. ಉಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ವ್ಯವಹಾರ ಜ್ಞಾನವನ್ನು ಹೊಸ ಆಲೋಚನೆಗಳು ಮತ್ತು ಯೋಜನೆಗಳ ಮೂಲಕ ಪ್ರಸ್ತುತಪಡಿಸುವುದರಿಂದ ಅವರ ಕೌಶಲಾಭಿವೃದ್ಧಿಗೆ ಉತ್ತಮ ಅವಕಾಶ ದೊರೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಯೋಗೀಶ್ ಶ್ಯಾನುಭೋಗ್ ವಂದಿಸಿದರು. ಇನ್ನೋರ್ವ ಸಂಯೋಜಕರಾದ ಸತೀಶ್ ಕಾಂಚನ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ವ್ಯವಹಾರ ಯೋಜನೆ ಪ್ರಸ್ತುತಿಯ ತೀರ್ಪುಗಾರರಾಗಿ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಗಳಾದ ಪ್ರದೀಪ್ ಪೂಜಾರಿ, ಸುನೀಲ್ ಮೊಗವೀರ ಹಾಗೂ ಪ್ರಸನ್ನ ಕುಮಾರ್ ಶೆಟ್ಟಿ ಭಾಗವಹಿಸಿದರು.
ಉಪ-ಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ವಿ. ಭಟ್ ಪ್ರಾಸ್ತಾವಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೀತಿ ಶೆಟ್ಟಿ ಉದ್ಘಾಟಕರನ್ನು ಪರಿಚಯಿಸಿ, ಪೃಥ್ವಿಶ್ರೀ ಜಿ. ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.
















