ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ 2026-27ನೇ ವರ್ಷದಲ್ಲಿ ದಾಖಲಾತಿ ಪಡೆದುಕೊಂಡು ಅಧ್ಯಯನಕ್ಕೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಲ್ಲಿ ಸುಪ್ತವಾದ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ನಡೆಸಲಾಯಿತು.
ವಿದ್ಯಾರ್ಥಿಗಳು ಮನೆಯನ್ನು ತೊರೆದು ಪಾಠಶಾಲೆಗೆ ಸೇರಿದ ದಿನಗಳಲ್ಲಿ ಮನೆಯ ನೆನಪಿನಲ್ಲಿರುತ್ತಾರೆ. ತಮಗೆ ಅವಕಾಶಗಳನ್ನು ಅರಸುತ್ತಿರುತ್ತಾರೆ. ತಮ್ಮನ್ನು ಗುರುತಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ಅವರಿಗೆ ಸೂಕ್ತ ವೇದಿಕೆಯನ್ನು ಒದಗಿಸಬೇಕಾದ ಸಹಪಾಠಿ-ಶಿಕ್ಷಕವೃಂದವೂ ಅವರ ಸುಪ್ತಪ್ರತಿಭೆಗಳ ಅನಾವರಣವನ್ನು ಬಯಸುತ್ತಿರುತ್ತಾರೆ. ಇದೆಲ್ಲವನ್ನು ಪರಿಗಣಿಸಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರು ಪ್ರತಿಭಾನ್ವೇಷಣಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಮಕ್ಕಳನ್ನು ಲವಲವಿಕೆಯಿಂದ ಕೂಡುವಂತೆ ಮಾಡಲು ಈ ಕಾರ್ಯಕ್ರಮ ಬಹಳ ಸಹಕಾರಿಯಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ ಕಾರ್ಯಕ್ರಮವನ್ನು ಆಮೂಲಾಗ್ರವಾಗಿ ಗಮನಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ, ಪ್ರೋತ್ಸಾಹಿಸಿದರು. ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರೂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗಾಂಧಾರಿ ವಿದ್ಯೆ, ಅಬಾಕಸ್, ಸಂಗೀತ, ನೃತ್ಯ, ಶ್ಲೋಕಪಠಣ, ಯೋಗ, ಭಜನೆ, ಏಕಪಾತ್ರಾಭಿನಯ, ಸಮೂಹಗಾಯನ, ಕಿರುನಾಟಕ, ಸಮೂಹನೃತ್ಯವೇ ಮೊದಲಾದ ತಮ್ಮ ಆಸಕ್ತಿಯ ಹವ್ಯಾಸಿ ಚಟುವಟಿಕೆಗಳ ಪ್ರದರ್ಶನವನ್ನು ನಡೆಸಿದರು. ಸೌಜನ್ಯಾ, ಹರ್ಷಿತಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

















