ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಕ್ತದಾನವು ಜೀವ ಉಳಿಸುವ ಮಹತ್ವದ ಕಾರ್ಯವಾಗಿದೆ. ಅತ್ಯಮೂಲ್ಯ ರಕ್ತವನ್ನು ಸಂಗ್ರಹಿಸುವ ಮಹತ್ವದ ಕಾರ್ಯದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಸೇವೆ ಶ್ಲಾಘನೀಯ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಶನಿವಾರ ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ನಡೆದ ರಕ್ತದಾನಿಗಳ ದಿನಾಚರಣೆ – 2026ನ್ನು ಉದ್ಘಾಟಿಸಿ ಮಾತನಾಡಿದರು.

ರಕ್ತದಾನವು ಜೀವ ಉಳಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕ ಕಾರ್ಯವಾಗಿದೆ., ಯುದ್ಧ ಹಾಗೂ ಅವಘಡಗಳ ಸಂದರ್ಭದಲ್ಲಿ ಅಗತ್ಯ ರಕ್ತವನ್ನು ನೀಡುವುದು ಮತ್ತು ಆರೋಗ್ಯ ಸೇವೆಗಳ ಮೂಲಕ ರೆಡ್ ಕ್ರಾಸ್ ಸಂಸ್ಥೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದೆ. ಜಗತ್ತಿನಲ್ಲಿ ಶಾಂತಿ, ನೆಮ್ಮದಿ, ಪ್ರೀತಿ, ಮತ್ತು ಮಾನವೀಯತೆಯನ್ನು ಪಸರಿಸುವ ಕೆಲಸವನ್ನು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದೆ. ರಕ್ತದಾನದ ಬಗ್ಗೆ ಸಾಕಷ್ಟು ಜಾಗೃತಿ, ಮೂಡಿಸುವುದು ಮತ್ತು ರಕ್ತದಾನಿಗಳ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಸಭಾಪತಿ ಎಸ್. ಜಯಕರ ಶೆಟ್ಟಿ ವಹಿಸಿದ್ದರು.
ವೇದಿಕೆಯಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಕೋಶಾಧ್ಯಕ್ಷರಾದ ಶಿವರಾಮ ಶೆಟ್ಟಿ , ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸತ್ಯನಾರಾಯಣ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಸರೋಜ ಎಮ್. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ ಉಡುಪಿ ಜಿಲ್ಲೆಯ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಮತ್ತು ಅತಿಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ಕಾಲೇಜುಗಳ ಪರವಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ತೆಂಕನಿಡಿಯೂರು ಮತ್ತು ರಕ್ತದಾನಿಗಳ ಪರವಾಗಿ 75 ಬಾರಿ ರಕ್ತದಾನ ಮಾಡಿದ ಸುದರ್ಶನ ಬರೆಕಟ್ಟೆ ಅನಿಸಿಕೆ ವ್ಯಕ್ತಪಡಿಸಿದರು .
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಘಟಕದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ಘಟಕದ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್ ಸ್ವಾಗತಿಸಿದರು. ಪ್ರಥಮ ಚಿಕಿತ್ಸೆ ತರಬೇತುದಾರರಾದ ಡಾ. ಸೋನಿ ಡಿಕೊಸ್ತಾ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ಶಿವರಾಮ ಶೆಟ್ಟಿ ವಂದಿಸಿದರು.
















