ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮಣೂರು ಪಡುಕರೆ ಗೀತಾನಂದ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ’ಸೃಷ್ಟಿ 2026’ ಹಸಿರು ಅಭಿಯಾನಕ್ಕೆ ವಡ್ಡರ್ಸೆಯ ನಾರಾಯಣ ಗುರು ವಸತಿ ಶಾಲೆ ಆವರಣದಲ್ಲಿ ನುಗ್ಗೆ, ದೀವಿಗೆ ಹಲಸು ಮತ್ತು ವಿವಿಧ ಹಣ್ಣಿನ ಗಿಡಗಳು ಹಾಗೂ ಶಾಲಾ ಮೈದಾನದ ಸುತ್ತ ನೆರಳನ್ನು ನೀಡುವ ದೊಡ್ಡದಾಗಿ ಬೆಳೆದು ಹೆಮ್ಮರವಾಗುವ ವಿವಿಧ ಜಾತಿಯ ಗಿಡಗಳನ್ನು ನಿಟ್ಟು ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯ ಅತಿಥಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಅವರು, ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಗಿಡಗಳನ್ನು ನೆಡುವುದರ ಜೊತೆಗೆ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನೂ ಎಲ್ಲರೂ ವಹಿಸಬೇಕು ಮತ್ತು ನಮ್ಮ ಸ್ವಯಂಸೇವಕರು ಆ ಕೆಲಸವನ್ನು ಸಹ ವಾರಾಂತ್ಯದಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎನ್ನಲು ನಮಗೆ ಹೆಮ್ಮೆ ಎಂದು ಹೇಳಿದರು.
ಅತಿಥಿಗಳಾದ ಜನತಾ ಸಂಸ್ಥೆಯ ಶ್ರೀನಿವಾಸ್ ಕುಂದರ್ ಹಾಗೂ ಮಿಥುನ್ ಕುಮಾರ್ ಮಾತನಾಡಿ, ಪರಿಸರ ಉಳಿವಿಗಾಗಿ ಸಮಾಜದ ಸಹಭಾಗಿತ್ವ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಕೋಳಿ ಅವರು ಗೀತಾನಂದ ಫೌಂಡೇಶನ್ ಪರಿಸರ ಜಾಗೃತಿಗಾಗಿ ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯಗಳನ್ನು ಶ್ಲಾಘಿಸಿ, ಇಂತಹ ಅಭಿಯಾನಗಳು ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನಿರ್ಮಿಸಲು ಸಹಕಾರಿಯಾಗಲಿವೆ ಎಂದರು.
ಈ ಸಂದರ್ಭದಲ್ಲಿ ಫೌಂಡೇಶನ್‌ನ ಪದಾಧಿಕಾರಿಗಳು, ಸದಸ್ಯರು, ಶಾಲೆಯ ಶಿಕ್ಷಕರು, ಸಿಬ್ಬಂದಿ, ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಗೀತಾನಂದ ಸ್ವಯಂಸೇವಕರು ಉಪಸ್ಥಿತರಿದ್ದರು.
















