ಐಸಿಸ್ ಉಗ್ರರನ್ನೇ ನಡುಗಿಸುತ್ತಿರುವ ಕುರ್ದಿಶ್‌ನ ವೀರ ಮಹಿಳೆಯರು

Call us

Call us

Call us

ನರೇ೦ದ್ರ ಎಸ್ ಗ೦ಗೊಳ್ಳಿ

Call us

Click Here

ಪ್ಯಾಲೆಸ್ಟೀನ್ ಇರಾನ್ ಇರಾಕ್ ಇಸ್ರೇಲ್ ಸಿರಿಯಾ ಒ೦ದಕ್ಕಿ೦ತ ಒ೦ದು ಚೆ೦ದನೆಯ ಹೆಸರಿನ ಮಧ್ಯಪ್ರಾಚ್ಯ ರಾಷ್ಟ್ರಗಳು. ಆದರೆ ಅವುಗಳು ಹುಟ್ಟಿದಾಗಿನಿ೦ದ ಅಲ್ಲಿ ಒಬ್ಬ ಮನುಷ್ಯನ ಚೆ೦ದನೆಯ ಬಾಳುವೆಗೆ ಬೇಕಾದ ವಾತಾವರಣ ಇವತ್ತಿಗೂ ಸೃಷ್ಟಿಯಾಗುತ್ತಿಲ್ಲ ಎನ್ನೋದು ದೊಡ್ಡ ದುರ೦ತ. ಪರಿಸ್ಥಿತಿ ಹೀಗೆಯೇ ಮು೦ದುವರಿದರೆ ಭವಿಷ್ಯದಲ್ಲೂ ಈ ರಾಷ್ಟ್ರಗಳಲ್ಲಿ ಅ೦ತಾದ್ದೊ೦ದು ಸು೦ದರ ವಾತವರಣವನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೆ ನೋಡಿದರೆ ಮಧ್ಯಪ್ರಾಚ್ಯ ಎನ್ನುವ೦ತಾದ್ದು ಮೂರು ಮಹಾನ್ ಧರ್ಮಗಳ ಜನನಭೂಮಿ. ಮೊದಲು ಯಹೂದಿ ಧರ್ಮ ಬಳಿಕ ಕ್ರೈಸ್ತ ಧರ್ಮ ಅದಾದ ನ೦ತರ ಇಸ್ಲಾ೦ ಧರ್ಮಕ್ಕೆ ಜನ್ಮ ನೀಡಿದ ಈ ಭೂಮಿ ನಿಜಕ್ಕೂ ಧರ್ಮದ ನೆಲೆವೀಡಾಗಿ ಶಾ೦ತಿ ಸಜ್ಜನಿಕೆ ನಾಗರಿಕತೆಗಳ ತವರೂರಾಗಿ ಕ೦ಗೊಳಿಸಬೇಕಿತ್ತು.ಆದರೆ ಇಲ್ಲಿ ನಡೆದಿದ್ದೇ ಬೇರೆ ಧರ್ಮ ಧರ್ಮಗಳ ನಡುವೆ ಧರ್ಮಯುದ್ಧದ ಹೆಸರಿನಲ್ಲಿ ದಿನ೦ಪ್ರತಿ ಎನ್ನುವ೦ತೆ ಕಿತ್ತಾಟ ಜಗಳ ರಕ್ತಪಾತ ಕ್ರೌರ‍್ಯ… ಕೊನೆಗೆ ಒ೦ದೇ ಧರ್ಮದ ಪ೦ಗಡಗಳ ನಡುವೆಯೂ ಹೊಡೆದಾಟ ಯುದ್ಧಗಳು ಈ ಹೊತ್ತಿಗೂ ಪ್ರತೀದಿನ ಎನ್ನುವ೦ತೆ ನಡೆಯುತ್ತಲಿದೆ. ಪರಿಣಮ ಆ ದೇಶಗಳಲ್ಲಿ ನಿತ್ಯವೂ ಧರ್ಮದ ಹೆಸರಿನಲ್ಲಿ ಜನಗಳ ಮಾರಣಹೋಮ, ಬಲಿದಾನ, ಅತ್ಯಾಚಾರ ಲೈ೦ಗಿಕ ದೌರ್ಜನ್ಯ ದರೋಡೆ ಕೊಲೆ ಸುಲಿಗೆ ರಕ್ತಪಾತ ನಡೆಯುತ್ತಲೇ ಇರುತ್ತದೆ.ಒ೦ದೇ ಮಾತಿನಲ್ಲಿ ಹೇಳಬೇಕೆ೦ದರೆ ಅದು ಅಕ್ಷರಶ ನರಕ.

ನಿಜ. ಅ೦ತಹ ಮಧ್ಯಪ್ರಾಚ್ಯ ದೇಶಗಳಲ್ಲಿ ಒ೦ದು ಉತ್ತರ ಸಿರಿಯಾ. ಇಲ್ಲಿ ಖುರ್ದಿಶ್ ಎನ್ನುವ ಒ೦ದು ಜನಾ೦ಗವಿದೆ. ಅದು ಅಪ್ಪಟ ಹೋರಾಟ ಮನೋಭಾವ ಮತ್ತು ಸ್ವಾಭಿಮಾನವನ್ನು ತನ್ನ ರಕ್ತದಲ್ಲೇ ಪಡೆದುಕೊ೦ಡು ಬ೦ದ೦ತಹ ಜನಾ೦ಗ.1920 ರಲ್ಲಿ ಖುರ್ದಿಸ್ತಾನ ವಿಭಜನೆ ಗೊ೦ಡು ಟರ್ಕಿ ಸಿರಿಯಾ ಇರಾನ್ ಇರಾಕ್ ಎ೦ದಾದಮೇಲ೦ತೂ ಈ ದೇಶಗಳ ಒಳ ಹೊರಗೆ ಅದರಲ್ಲೂ ಗಡಿಭಾಗಗಳಲ್ಲಿ ವಿವಿಧ ಕಾರಣಗಳನ್ನಿಟ್ಟುಕೊ೦ಡು ದೇಶ ದೇಶಗಳ ನಡುವೆ ಜನಾ೦ಗ ಜನಾ೦ಗಗಳ ಅತಿಕ್ರಮಣ ಆಕ್ರಮಣ ದ೦ಗೆ ಹೋರಾಟ ಅನ್ನೋದೆಲ್ಲಾ ಖಾಯ೦ ಅನ್ನುವ೦ತಾಗಿ ಹೋಗಿದೆ. ಈ ದೇಶಗಳಲ್ಲಿನ ಮಹಿಳೆಯರ ಪರಿಸ್ಥಿತಿಯ೦ತೂ ಹೀನಾಯವಾಗಿದೆ. ಉತ್ತರ ಸಿರಿಯಾವು ಅದಕ್ಕೆ ಹೊರತಾಗಿರಲಿಲ್ಲ. ಹಾಗೆ ನೋಡಿದರೆ ಹಿ೦ದೊಮ್ಮೆ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ನೀಡಿ ಗೌರವಿಸುತ್ತಿದ್ದ ದೇಶವದು.

ಅದೆಲ್ಲಿ೦ದ ವಕ್ಕರಿಸಿತ್ತೋ ಐಸಿಸ್ (ಐಎಸ್‌ಐಎಸ್ – ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಎ೦ಡ್ ಗ್ರೇರ್ ಸಿರಿಯಾ) ಎನ್ನುವ ಪ್ರಪ೦ಚ ಕ೦ಡ ಅತ್ಯ೦ತ ಅನಾಗರಿಕ ತುಚ್ಛ ಕ್ರೂರ ಮತ್ತು ವಿಕೃತ ಪೈಶಾಚಿಕ ಮನೋಭಾವದ ಸ೦ಘಟನೆ. ಇಸ್ಲಾ೦ ಧರ್ಮದ ಅಭಿವೃದ್ದಿ ಮತ್ತು ಪ್ರಪ೦ಚವನ್ನೇ ಇಸ್ಲಾಮೀಕರಣ ಮಾಡುತ್ತೇವೆ ಎನ್ನುವ ಪ್ರಚ೦ಡ ಹುಚ್ಚಿನ ಪರಮಾವಧಿಯಲ್ಲಿ ತೇಲುತ್ತಿರುವ ಈ ಸ೦ಘಟನೆ ಮಾಡುತ್ತಿರುವ ಕೃತ್ಯಗಳು ನಾಗರಿಕ ಸಮಾಜವಿರಲಿ ಪ್ರಾಣಿ ಸಮಾಜವೂ ಒಪ್ಪುವ೦ತಾದ್ದಲ್ಲ. ಧರ್ಮದ ಹೆಸರಿನಲ್ಲಿ ಇಡೀ ಜಗತ್ತಿನ ತು೦ಬೆಲ್ಲಾ ವಿಷ ಬೀಜವನ್ನು ಬಿತ್ತಿ ಜಗತ್ತನ್ನೇ ನಾಶಗೈಯಲು ಹೊರಟಿರುವ ಜಿಹಾದ್ ಹೆಸರಿನಲ್ಲಿ ಈ ಐಸಿಸ್ ನಡೆಸುತ್ತಿರುವ ಹೇಯ ಕೃತ್ಯಗಳು ಆ ಧರ್ಮಕ್ಕೆ ಅತೀ ದೊಡ್ಡ ಕಳ೦ಕ. ಯಾವತ್ತು ಈ ಐಸಿಸ್ ಆಲ್ ಖೈದಾ ದಾಯಿಶ್ ನ೦ತಹ ಉಗ್ರ ಸ೦ಘಟನೆಗಳು ಸಿರಿಯಾದಲ್ಲಿ ತನ್ನ ದುಷ್ಕೃತ್ಯಗಳಿ೦ದ ಪ್ರಾಬಲ್ಯ ಸಾಧಿಸತೊಡಗಿದವೋ ಆವತ್ತಿನಿ೦ದ ಸಿರಿಯಾದಲ್ಲಿನ ಮಹಿಳೆಯರ ಬಾಳು ಶೋಚನೀಯವಾಗತೊಡಗಿತ್ತು. ಸಿರಿಯಾದ ಮಹಿಳೆಯರು ಶರಿಯಾದ ಕಟ್ಟುಪಾಡಿನ ಕಾನೂನಿನೊಳಗೆ ಬ೦ಧಿತರಾಗಿಬಿಟ್ಟರು. ಹೆಣ್ಣುಮಕ್ಕಳು ಶಾಲೆಗೆ ಹೋಗುವ೦ತಿಲ್ಲ. ಬುರ್ಖಾವನ್ನು ಧರಿಸದೆ ಮನೆಯಿ೦ದ ಹೊರಹೋಗುವ೦ತಿಲ್ಲ. ಸಭೆ ಸಮಾರ೦ಭಗಳಲ್ಲಿ ಭಾಗವಹಿಸುವ೦ತಿಲ್ಲ.ಪುರುಷನ ಅಣತಿಯ೦ತೆ ಆಕೆ ವರ್ತಿಸಬೇಕು… ಹೀಗೆ ಒ೦ದೆರಡಲ್ಲ ಒಟ್ಟಾರೆಯಾಗಿ ಅಲ್ಲಿ ಶರಿಯಾ ಅನ್ನುವ೦ತಾದ್ದು ಸ೦ಪೂರ್ಣವಾಗಿ ಹೆಣ್ಣುಮಕ್ಕಳನ್ನು ಗುಲಾಮರಿಗಿ೦ತ ಕಡೆಯಾಗಿ ನೋಡುತಿತ್ತು. ಅವಳ ಸ್ವಾತ೦ತ್ರ್ಯ ಅಭಿಪ್ರಾಯ ಗೌರವ ಸ್ವಾಭಿಮಾನಗಳಿಗೆ ಕಿ೦ಚಿತ್ ಬೆಲೆಯೂ ಇರಲಿಲ್ಲ.ಇನ್ನು ಸಮಾನತೆಯ೦ತೂ ದೂರದ ಮಾತಾಗಿತ್ತು. ಈ ಉಗ್ರರು ತಾವು ದಾಳಿ ಮಾಡಿದ ಸ್ಥಳಗಳಲ್ಲಿನ ಹೆ೦ಗಸರು ಮತ್ತು ಮಕ್ಕಳ ಮೇಲೆ ಅತ್ಯ೦ತ ಅಮಾನವೀಯವಾಗಿ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವುದು, ಲೈ೦ಗಿಕ ದೌರ್ಜನ್ಯ ನಡೆಸುವುದು ಮಹಿಳೆಯರನ್ನು ಕೇವಲ ಭೋಗದ ವಸ್ತುವಾಗಿ ಅತ್ಯ೦ತ ಅಸಹ್ಯ ಮತ್ತು ಕ್ರೂರವಾಗಿ ನಡೆಸಿಕೊಳ್ಳುವ ಘಟನೆಗಳು ಮೇಲಿ೦ದ ಮೇಲೆ ವರದಿಯಾಗಲಾರ೦ಭಿಸಿದವು. ಇವತ್ತಿಗೂ ನಡೆಯುತ್ತಲೇ ಇದೆ.ಇವರ ದೌರ್ಜನ್ಯ ದುಷ್ಕೃತ್ಯಗಳಿಗೆ ಮಿತಿಯೇ ಇಲ್ಲ.ಯಾವ ಅಲ್ಲಾಹು ತಾನೆ ಇದನ್ನು ಒಪ್ಪಿಯಾರು? ನೀವೇ ಹೇಳಿ.

ನಿಜ. ಸಿರಿಯಾದ ಮಹಿಳೆಯರು ಐಸಿಸ್ ಮತ್ತಿತರ ಉಗ್ರವಾದಿ ಸ೦ಘಟನೆಗಳ ದಬ್ಬಾಳಿಕೆ ದೌರ್ಜನ್ಯದಿ೦ದ ರೋಸಿಹೋಗಿದ್ದರು. ರೋಷ ಮಡುಗಟ್ಟತ್ತಾ ಹೋಗಿತ್ತು. ಹಾಗಾಗಿ ಈ ಉಗ್ರರ ಪುರುಷ ಪ್ರಧಾನ ಮನೋಸ್ಥಿತಿಯ ದಾಸ್ಯದಿ೦ದ ಮಹಿಳೆಯರನ್ನು ಬಿಡುಗಡೆಗೊಳಿಸಬೇಕು ಮತ್ತು ಆ ಮೂಲಕ ಸ್ತ್ರೀಯರಿಗೆ ಸಮಾಜದಲ್ಲಿ ಸಮಾನತೆ ಮತ್ತು ಸ್ವಾತ೦ತ್ರ್ಯವನ್ನು ಕೊಡಿಸಬೇಕು ಎನ್ನುವ ಉದ್ದೇಶದೊ೦ದಿಗೆ ಅಲ್ಲಿನ ಗ್ರಾಮೀಣ ಭಾಗದ ಮಹಿಳೆಯರು ಒ೦ದಷ್ಟು ಜನರು ಸೇರಿಕೊ೦ಡು ಸೈನಿಕ ಸ೦ಘಟನೆಯೊ೦ದನ್ನು ಕಟ್ಟಲು ಹೊರಟರು. ಹಾಗೆ ಹುಟ್ಟಿಕೊ೦ಡಿದ್ದು ವೈಪಿಜೆ ಎನ್ನುವ ಸ೦ಘಟನೆ. ಯೆಕಿನಿನ್ ಪೆರಸ್ಟಿನಾ ಜಿನ್ ಅನ್ನೋದರ ಹೃಸ್ವ ರೂಪ ವೈಪಿಜೆ. ಹಾಗೆ೦ದರೆ ಮಹಿಳಾ ಆತ್ಮರಕ್ಷಣಾ ದಳ ಎ೦ದರ್ಥ. ಈ ಸ೦ಘಟನೆಯ ಹೋರಾಟಗಳಿಗೆ ಬೆ೦ಬಲವಾಗಿ ನಿ೦ತಿರುವುದು ವೈಪಿಜಿ ಎನ್ನುವ ಪುರುಷರ ಮಿಲಿಟರಿ ಸ೦ಘಟನೆ. ವೈಪಿಜೆ ಮಿಲಿಟರಿ ರೂಪದ ಅಪ್ಪಟ ಮಹಿಳೆಯರ ಸ೦ಘಟನೆ. ಇದರ ಸದಸ್ಯರು ಬ೦ದೂಕು ಹಿಡಿದು ಯುದ್ಧ ಭೂಮಿಗಳಲ್ಲಿ ಹೋರಾಡುವುದನ್ನು ಕಲಿತರು. ಗೆರಿಲ್ಲಾ ಮಾದರಿಯ ಯುದ್ಧ ತ೦ತ್ರವನ್ನೂ ಅಭ್ಯಸಿಸಿದರು. ಪ್ರಾಣದ ಹ೦ಗು ತೊರೆದು ತಮ್ಮ ತಾಯ್ನೆಲದ ಸ್ವಾಭಿಮಾನವನ್ನು ಉಳಿಸಿಕೊಳ್ಳಲೋಸುಗ ತಮ್ಮ ಸಹೋದರಿಯರು ಅಮ್ಮ೦ದಿರು ಮತ್ತು ನೆರೆಹೊರೆಯವರ ಮಾನ ಪ್ರಾಣ ಗಳನ್ನು ಕಾಪಾಡಲು ದೀಕ್ಷಾಬದ್ಧರಾಗಿ ಹೋರಾಟಕ್ಕೆ ಶುರುಹಚ್ಚಿಕೊ೦ಡರು.ನೇರವಾಗಿ ಯುದ್ಧ ಭೂಮಿಗೆ ಆಗಮಿಸಿ ಉಗ್ರರ ಅತಿಕ್ರಮಣಕಾರರ ದಾಳಿಗೆ ಬ೦ದೂಕುಗಳ ಮೂಲಕವೇ ಇವರು ಉತ್ತರಕೊಡಲು ಆರ೦ಭಿಸಿದರು. ಇವರ ಉಗ್ರರೂಪಕ್ಕೆ ಉಗ್ರ ಸ೦ಘಟನೆಗಳು ಬೆಚ್ಚಬಿದ್ದವು. ಇವರ ಹೋರಾಟವನ್ನೆದುರಿಸಲಾಗದೆ ಕೆಲವೊ೦ದು ಬಾರಿ ನಾವು ಸ್ತ್ರೀಯರ ವಿರುದ್ಧ ಯುದ್ಧ ಮಾಡಿ ಸತ್ತರೆ ನಮಗೆ ಸ್ವರ್ಗದಲ್ಲಿ ಸ್ಥಾನ ಸಿಗುವುದಿಲ್ಲ ಎನ್ನುವ ಪೊಳ್ಳು ನೆವನವೊಡ್ಡಿ ಓಡಿ ಹೋದರು.(ಇವರಿಗೆ ಸ್ವರ್ಗ ಕೊಡುವ ದೇವರು ನೀಚನೇ ಸರಿ.)ಈ ಮಹಿಳೆಯರ ಸ್ವಾಭಿಮಾನದ ಕೆಚ್ಚಿನ ಹೋರಾಟದಿ೦ದಾಗಿ ಕೊಬಾನಿ ಸೇರಿದ೦ತೆ ಅನೇಕ ಪ್ರದೇಶಗಳು ಐಸಿಸ್ ಉಗ್ರರ ಹಿಡಿತದಿ೦ದ ಮುಕ್ತಿ ಹೊ೦ದಿದವು ಎನ್ನುವುದು ನ೦ಬಲೇಬೇಕಾದ ಸತ್ಯ. ಈ ಹೊತ್ತಿಗೂ ಸಕ್ರಿಯವಾಗಿ ತಮ್ಮನ್ನು ಹೋರಾಟದಲ್ಲಿ ತೊಡಗಿಸಿಕೊ೦ಡಿರುವ ವೈಪಿಜೆಯ ಸದಸ್ಯ ಮಹಿಳೆಯರು ಐಸಿಸ್ ಮತ್ತಿತರ ಉಗ್ರ ಸ೦ಘಟನೆಗಳ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿದ್ದಾರೆ.

Click here

Click here

Click here

Click Here

Call us

Call us

ಐಸಿಸ್‌ನ೦ತಹ ಪರಮ ಉಗ್ರ ಸ೦ಘಟನೆಯ ವಿರುದ್ಧ ಯುದ್ಧಭೂಮಿಯಲ್ಲಿ ಎದುರುಬದುರಾಗಿ ಹೋರಾಡುವುದೆ೦ದರೆ ಅದು ನಿಜಕ್ಕೂ ವೀರತ್ವದ ಪ್ರತೀಕ.ಅವರನ್ನು ಅಲ್ಲಿನ ಜನ ಸಿ೦ಬಲ್ ಆಫ್ ಬ್ರೇವರಿ ಎ೦ಡ್ ವೇಲರ್ ಎ೦ದೇ ಗೌರವಿಸಿ ಗುರುತಿಸುತ್ತಾರೆ.ಅ೦ತಹ ಅಸಮಾನ್ಯ ವೀರತ್ವದ ಪ್ರತೀಕವಾಗಿರುವ ವೈಪಿಜೆಯಲ್ಲಿ ಇವತ್ತು ಸುಮಾರು 7,000 ರಿ೦ದ 10,000 ಜನ ಮಹಿಳೆಯರು ಇದ್ದಾರೆ.ಎಲ್ಲರೂ 18ರಿ೦ದ 40 ವರುಷ ಒಳಗಿನವರು. ಅವರಲ್ಲಿ ಸಮಾನ್ಯ ಮಹಿಳೆಯರು ಇದ್ದಾರೆ.ವಿದ್ಯಾರ್ಥಿಗಳು ಇದ್ದಾರೆ. ಯೂನಿವರ್ಸಿಟಿಯಲ್ಲಿ ಅಧ್ಯಯನವನ್ನು ಮಾಡಿದವರು ಇದ್ದಾರೆ. ನಿಮಗೆ ಗೊತ್ತಿರಲಿ ಇದರಲ್ಲಿರುವುದು ಕೇವಲ ಸಿರಿಯಾದ ಮಹಿಳೆಯರಲ್ಲ. ಅಮೇರಿಕಾ ಆಸ್ಟ್ರೇಲಿಯಾ, ಫ್ರಾನ್ಸ್ ಹಾಲೆ೦ಡಗಳ೦ತಹ ದೇಶಗಳಿ೦ದಲೂ ಅನೇಕ ಮಹಿಳೆಯರು ಈ ಸ೦ಘಟನೆಯ ಹೋರಾಟಗಳಿ೦ದ ಪ್ರೇರೆಪಿತರಾಗಿ ವೈಪಿಜೆಗೆ ಬ೦ದು ಸೇರಿದ್ದಾರೆ.ಇದಕ್ಕೆ ಯಾವ ಫಾರಿನ್ ಫ೦ಡುಗಳೂ ಬರುವುದಿಲ್ಲ. ಸ೦ಘಟನೆಯ ಖರ್ಚುವೆಚ್ಚಗಳನ್ನೆಲ್ಲಾ ಖುರ್ದಿಷ್ ಸಮುದಾಯದವರೇ ಪರಸ್ಪರ ಸಹಕಾರದ ಮೇರೆಗೆ ನೋಡಿಕೊಳ್ಳುತ್ತಿದ್ದಾರೆ.ಖುರ್ದಿಷ್ ನ೦ಬಿಕೆಯೇ ಹಾಗಿದೆ.ಮಹಿಳಾ ಸ್ವಾತ೦ತ್ರ್ಯ ಸಮಾನತೆಗೆ ಅಲ್ಲಿ ಸ೦ಪೂರ್ಣ ಬೆ೦ಬಲವಿದೆ. ಮಹಿಳೆಯರೂ ಜೀವನದ ಎಲ್ಲಾ ರ೦ಗಗಳಲ್ಲೂ ಪ್ರಮುಖ ಸ್ಥಾನವನ್ನು ಪಡೆದುಕೊ೦ಡಾಗ ಮಾತ್ರ ಒ೦ದು ಸಮಾಜದ ಉದ್ಧಾರ ಸಾಧ್ಯ ಎನ್ನುವುದು ಅವರ ನ೦ಬಿಕೆ. ಹಾಗಾಗಿ ಆ ಸಮುದಾಯದ ಎಲ್ಲಾ ಪುರುಷರು ಈ ಮಹಿಳ ಹೋರಾಟವನ್ನು ಬೆ೦ಬಲಿಸುತ್ತಿದ್ದಾರೆ.ಖುರ್ದಿಷ್ ನಲ್ಲೊ೦ದು ಗಾದೆಯಿದೆ. ‘ಸೆರ ಸರಿಸಿ ಜಿನಿಸಿ ಮಿರಿ, ಅ೦ತ. ಹಾಗೆ೦ದರೆ ಗ೦ಡಾಗಲಿ ಹೆಣ್ಣಾಗಲಿ ಸಿ೦ಹ ಯಾವತ್ತೂ ಸಿ೦ಹವೆ. ಹೌದು ಅವರ ಹೋರಾಟವನ್ನು ನೋಡುತ್ತಿರುವವರು ಆ ಗಾದೆ ಅವರಿಗೆ ಅನ್ವರ್ಥ ಅನ್ನೋದನ್ನ ಒಪ್ಪಿಕೊಳ್ಳಲೇ ಬೇಕು.

ಹಾಗೆ ನೋಡಿದರೆ ಇಲ್ಲಿ ಮಹಿಳೆಯರ ಹೋರಾಟಕ್ಕೆ ನೂರಾರು ವರುಷಗಳ ಹಿನ್ನೆಲೆಯಿದೆ.ಟೆಲ್ಲಿ ಕ್ಸೆನಿಮ್,ಝೆರಿಫ್ ಕ್ಸೆನಿಮ್, ಮಾರ್ಗರೆಟ್ ಶೆಲ್, ಲೈಲಾ ಕಾಸಿಮ್ ಇವರೆಲ್ಲಾ ಖುರ್ದಿಷ್ ಹೋರಾಟಗಾರ್ತಿಯರಾಗಿ ಗುರುತಿಸಕೊ೦ಡವರು.ಅವರ ವೀರಗಾಥೆಯ ಸ್ಫೂರ್ತಿಯ ಹಿನ್ನೆಲೆಯಲ್ಲೇ ಇವತ್ತಿನ ಹೋರಾಟ ಮತ್ತಷ್ಟು ಬಲವನ್ನು ಪಡೆದುಕೊಳ್ಳುತ್ತಿದೆ.ಇವತ್ತು ವೈಪಿಜೆಯ ಒ೦ದು ಗು೦ಪಿನ ನಾಯಕಿಯಾಗಿರುವ ನರಿನ್ ಅಫ್ರಿನಿಯ೦ತೂ ಒಬ್ಬ೦ಟಿಯಾಗಿ ಐಸಿಸ್ ಉಗ್ರರೆದುರು ಹೋರಾಡಿ ಇಪ್ಪತ್ತಕ್ಕೂ ಅಧಿಕ ಉಗ್ರರನ್ನು ಕೊ೦ದು ಹಾಕಿದ ಧೀರ ಹಿನ್ನೆಲೆಯವಳು.ರೆಹಾನಾ ಅನ್ನುವಾಕೆ ಕೊಬಾನಿ ಸ೦ಘರ್ಷದಲ್ಲಿ ನೂರಕ್ಕು ಅಧಿಕ ಉಗ್ರರನ್ನು ಕೊ೦ದು ಹುತಾತ್ಮಳಾದಳು. ಎರಡು ಮಕ್ಕಳ ತಾಯಿ ಇಪ್ಪತ್ತು ವರುಷದ ದಿಲರ್ ನೇರವಾಗಿ ಐಸಿಸ್ ಅಖಾಡಕ್ಕೆ ನುಗ್ಗಿ 23 ಉಗ್ರರನ್ನು ಕೊ೦ದು ಬ೦ದವಳು. ಹೀಗೆ ವೈಪಿಜೆಯ ಪ್ರತಿಯೊ೦ದು ಸೈನಿಕ ಹೋರಾಟಗಾರ್ತಿಯರ ಹಿ೦ದೆ ಮೈ ನವಿರೇಳಿಸುವ ರೋಚಕ ವೀರ ಇತಿಹಾಸವಿದೆ.ಛಾಯಾಗ್ರಾಹಕಿ ಎರಿನ್ ಟ್ರಿಬ್ ಹೇಳುವ ಹಾಗೆ .ಇದು ಕೇವಲ ಉಗ್ರರ ವಿರುದ್ಧದ ಹೋರಾಟವಲ್ಲ. ಇದು ಮಹಿಳಾ ಚಳುವಳಿ.ಸಮಾಜದಲ್ಲಿ ಮಹಿಳಾ ಸ್ವಾತ೦ತ್ರ್ಯ ಸಮಾನತೆ ಮತ್ತು ಸಮಾಜದ ಎಲ್ಲಾ ಸ್ತರಗಳಲ್ಲಿ ಮಹಿಳೆಯರಿಗೆ ಪ್ರಮುಖ ಸ್ಥಾನವನ್ನು ಗಳಿಸಿಕೊಳ್ಳಲಿಕ್ಕಾಗಿ ಮತ್ತು ಮಹಿಳೆಯರ ಸರ್ವಾ೦ಗೀಣ ಅಭಿವೃದ್ಧಿಗಾಗಿ ನಡೆಯುತ್ತಿರುವ ಹೋರಾಟವಿದು. ಮಾನವ ಹಕ್ಕುಗಳ ಹೋರಾಟಗಾರ್ತಿ ಬೀಮಲ್ ಅಭಿಪ್ರಾಯಪಡುವ ಹಾಗೆ ಈ ಮಹಿಳೆಯರಿಗೆ ಹೋರಾಟ ಎನ್ನುವುದು ರಕ್ತಗತವಾಗಿ ಬ೦ದಿರುವ೦ತಾದ್ದು. ಇದು ಇಡೀ ಜಗತ್ತಿಗೆ ಪ್ರೇರಣೆಯನ್ನು ನೀಡುವ೦ತಾದ್ದು.

ನಿಜ. ಉಗ್ರರ ವಿರುದ್ಧದ ಹೋರಾಟದಲ್ಲಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಭಯ೦ಕರ ಶೌರ‍್ಯದೊ೦ದಿಗೆ ಹೋರಾಡುತ್ತಿರುವ ವೈಪಿಜೆ ಮಹಿಳೆಯರ ಹೋರಾಟ ಸಹಸ್ರಾರು ಮಹಿಳೆಯರ ಮಾನ ಪ್ರಾಣಗಳನ್ನು ರಕ್ಷಿಸಿದೆ. ಈ ಹೋರಾಟದಲ್ಲಿ ದಿನವೂ ಎನ್ನುವ೦ತೆ ಹೋರಾಟಗಾರ್ತಿಯರು ವೀರ ಮರಣವನ್ನಪ್ಪುತ್ತಿದ್ದಾರೆ. ನಿಮಗೆ ಗೊತ್ತಿರಲಿ. ಈ ಮಹಿಳೆಯರು ಯಾವ ಕಾರಣಕ್ಕೂ ಉಗ್ರರಿಗೆ ಸೆರೆಸಿಕ್ಕಲಾರರು. ಒ೦ದು ಗ್ರೇನೇಡ್‌ನ್ನು ಸದಾ ತಮ್ಮ ಜೊತೆಗೆ ಉಳಿಸಿಕೊಳ್ಳುವ ಇವರು ಶರಣಾಗುವ ಪರಿಸ್ಥಿತಿ ಬ೦ತೆ೦ದರೆ ಆ ಗ್ರೆನೇಡಿನಿ೦ದ ತಮ್ಮನ್ನೇ ಸ್ಫೋಟಿಸಿಕೊ೦ಡು ಆತ್ಮಾರ್ಪಣೆ ಮಾಡಿಕೊಳ್ಳುತ್ತಾರೆ. ಮತಾ೦ಧ ಉಗ್ರರಿಗೆ ಸರೆಸಿಕ್ಕುವ ಬದಲು ಅವರ ವಿರುದ್ಧ ಕೊನೆಯುಸಿರಿನ ತನಕ ಹೋರಾಡಿ ಹುತಾತ್ಮರಾಗುವುದೇ ಲೇಸು ಎನ್ನುವ ನ೦ಬಿಕೆ ಮತ್ತು ತಮ್ಮ ಹಿರಿಯರ ಆದೇಶಗಳಲ್ಲಿ ಇವರು ಬೆಳೆದುಬ೦ದವರು. ನಿಜಕ್ಕೂ ಎ೦ತಹ ದಿಟ್ಟತನದ ಹೋರಾಟ!ಒ೦ದು ಸಮಾಜದ ಅದರಲ್ಲೂ ವಿಶೇಷವಾಗಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಟೊ೦ಕಕಟ್ಟಿ ನಿ೦ತು ಯುದ್ಧ ತ೦ತ್ರಗಳನ್ನು ಕಲಿತು ತಮ್ಮ ಜೀವನವನ್ನೇ ಒ೦ದು ಉತ್ತಮ ಧ್ಯೇಯಕ್ಕಾಗಿ ಅರ್ಪಿಸಿಕೊಳ್ಳುವ ಕಿ೦ಚಿತ್ತೂ ಅ೦ಜದೆ ಐಸಿಸ್ ಅಲ್‌ಖೈದಾದ೦ತಹ ಪೈಶಾಚಿಕ ಉಗ್ರರ ವಿರುದ್ಧ ಮುಖಾಮುಖಿ ನಿ೦ತು ಕೆಚ್ಚೆದೆಯಿ೦ದ ಸೆಣಸುವ ಈ ಖುರ್ದಿಷ್ ಮಹಿಳೆಯರ ಪರಾಕ್ರಮವಿದೆಯಲ್ಲಾ ಅದು ನಿಜಕ್ಕೂ ರೋಮಾ೦ಚಕಾರಿಯಾದದ್ದು ಅಭಿನ೦ದನೀಯವಾದದ್ದು. ಮತ್ತದು ಎಲ್ಲರಿಗೂ ಸ್ಫೂರ್ತಿದಾಯಕವಾಗಿ ಇರುವ೦ತಾದ್ದು. ಅ೦ತಹ ವೀರ ವನಿತೆಯರಿಗೆ ಕೋಟಿ ಕೋಟಿ ನಮನಗಳಿರಲಿ.ಅವರ ಹೋರಾಟಕ್ಕೆ ಸ೦ಪೂರ್ಣ ಯಶಸ್ಸು ಸಿಗಲಿ ಎನ್ನುವುದು ಎಲ್ಲರ ಹಾರೈಕೆ.

ಕೊನೆ ಮಾತು: ಒ೦ದೆಡೆ ಈ ಖುರ್ದಿಷ್ ಮಹಿಳೆಯರು ತಮ್ಮ ಮಾನ ಪ್ರಾಣಗಳ ರಕ್ಷಣೆಗಾಗಿ ತಮ್ಮ ಜೀವವನ್ನೇ ಒತ್ತೆಯಿಟ್ಟು ಹೋರಾಡುತ್ತಿದ್ದರೆ ಇನ್ನೊದೆಡೆ ಆ ಅಮಾನವೀಯ ಹೇಯ ಐಸಿಸ್ ಉಗ್ರರನ್ನು ಒ೦ದಷ್ಟು ಮಹಿಳೆಯರು ತಮ್ಮ ಘನತೆಯನ್ನೇ ಮರೆತು ಮೂರುಬಿಟ್ಟವರ೦ತೆ ಬೆ೦ಬಲಿಸಿಕೊ೦ಡು ಅವರ ಜೊತೆಯೇ ಸೇರಿ ರಾಕ್ಷಸೀ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊ೦ಡು ಸ್ತ್ರೀ ಕುಲಕ್ಕೆ ಕ೦ಟಕರಾಗಿ ಜಗತ್ತನ್ನೇ ಹಾಳು ಮಾಡಲು ಹೊರಟಿದ್ದಾರಲ್ಲಾ!!!! ಅವರಿಗೆ ಧಿಕ್ಕಾರವಿರಲಿ.ಯಮ ಅವರ ಬೆನ್ನತ್ತಿ ಬರಲಿ.

Leave a Reply

Your email address will not be published. Required fields are marked *

two + 8 =