ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಇತ್ತೀಚಿಗೆ ಇ.ಎಸ್.ಐ ಎಂಪನೆಲ್ಡ್ ಆಸ್ಪತ್ರೆಗಳ ಸಂಖ್ಯೆಯನ್ನು ಕಡಿತ ಗೊಳಿಸಿರುವುದು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯನ್ನು ಇ.ಎಸ್.ಐ ಆರೋಗ್ಯ ಸೇವೆ ನೀಡುವ ಎಂಪನೆಲ್ಡ್ ಆಸ್ಪತ್ರೆಗಳ ಪಟ್ಟಿಯಿಂದ ಕೈ ಬಿಟ್ಟ ಕಾರಣ ಉಡುಪಿ ಜಿಲ್ಲೆ ಸೇರಿದಂತೆ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕಾರ್ಮಿಕರು ಮಣಿಪಾಲ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳನ್ನು ನಿರಂತರವಾಗಿ ಪಡೆಯುತ್ತಿದ್ದು, ಪ್ರಸ್ತುತ ಸದರಿ ಆಸ್ಪತ್ರೆಯನ್ನು ಕೈ ಬಿಟ್ಟಿರುವುದರಿಂದ ಸಾಕಷ್ಟು ಸಮಸ್ಯೆ ಆಗುತ್ತಿರುವುದರಿಂದ ಸದರಿ ಕೆಎಂಸಿ ಆಸ್ಪತ್ರೆಯನ್ನು ಮುಂದುವರಿಸುವಂತೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನದಲ್ಲಿ ಸರಕಾರವನ್ನು ಆಗ್ರಹಿಸಿ ಮಾತನಾಡಿದರು.
ಚುಕ್ಕೆ ರಹಿತ ಪ್ರಶ್ನೆಗೆ ಉತ್ತರಿಸಿದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಕಾರ್ಮಿಕರ ರಾಜ್ಯ ಜೀವ ವಿಮಾ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆ ಗಳೊಂದಿಗೆ ಹೊಸದಾಗಿ ಟೆಂಡರ್ ಮೂಲಕ ಒಡಂಬಡಿಕೆ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಇ -ಟೆಂಡರ್ ಪೋರ್ಟಲ್ ನಲ್ಲಿ ಒಂದೇ ಪ್ಯಾನ್ ಕಾರ್ಡ್ ಮೂಲಕ ಹಲವು ಶಾಖೆಗಳಿಗೆ ಅರ್ಜಿ ಸಲ್ಲಿಸಿದ 30 ಆಸ್ಪತ್ರೆಗಳ ಅರ್ಜಿಗಳು ಇ – ಪೋರ್ಟಲ್ ನಲ್ಲಿ ತಿರಸ್ಕೃತ ಗೊಂದಿರುತ್ತದೆ. ಇ -ಪೋರ್ಟಲ್ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದಂತೆ ತಿರಸ್ಕೃತಗೊಂಡಿರುವ ಎಲ್ಲಾ ಆಸ್ಪತ್ರೆಗಳ ಪ್ರಕರಣಗಳನ್ನು ಪರಿಗಣಿಸುವ ಪ್ರಸ್ತಾವನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿರುವ ಇ.ಎಸ್.ಐ ಎಂಪಾನೆಲ್ಡ್ ಆಸ್ಪತ್ರೆಗಳ ಸಂಖ್ಯೆ: 116, ಉಡುಪಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇರುವ ಇ.ಎಸ್.ಐ ನೋಂದಾಯಿತ ಕಾರ್ಮಿಕರ ಸಂಖ್ಯೆ: ಉಡುಪಿ- 69882, ಶಿವಮೊಗ್ಗ- 71200, ಉತ್ತರ ಕನ್ನಡ- 19745
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಳಗೊಂಡಿರುವ ಆಸ್ಪತ್ರೆಗಳ ಸಂಖ್ಯೆ- 7( ಆದರ್ಶ ಆಸ್ಪತ್ರೆ ಉಡುಪಿ, ನ್ಯೂ ಸಿಟಿ ಉಡುಪಿ, ಹೈ ಟೆಕ್ ಮೆಡಿಕೆರ್ ಉಡುಪಿ, ಮಹೇಶ್ ಆಸ್ಪತ್ರೆ ಉಡುಪಿ, ಪ್ರಸಾದ್ ನೇತ್ರಾಲಯ ಉಡುಪಿ, ಡಾ. ಎ.ವಿ ಬಾಳಿಗ ಆಸ್ಪತ್ರೆ ಉಡುಪಿ, ಮಂಜುನಾಥ್ ಆಸ್ಪತ್ರೆ ಕುಂದಾಪುರ) ಈ ಬಗ್ಗೆ ಕಾರ್ಮಿಕ ಸಚಿವಾಲಯ ಮಾಹಿತಿ ನೀಡಿದ್ದಾರೆ.
















